ಐಟಿ - ಬಿಟಿ ಕಂಪನಿಗಳು ಬೆಂಗಳೂರು ಬಿಡುವ ಆತಂಕ: ಹೊರ ವರ್ತುಲ & ಸರ್ಜಾಪುರ ರಸ್ತೆಯಲ್ಲಿ ಮಹತ್ವದ ಬದಲಾವಣೆ!
ಬೆಂಗಳೂರಿನಿಂದ ಐಟಿ - ಬಿಟಿ ಕಂಪನಿಗಳು ದೂರುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಕೆಲವೊಂದು ಪ್ರದೇಶದಲ್ಲಿ ಮೇಜರ್ ಸರ್ಜರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಮುಂದಾಗಿದೆ. ಬೆಂಗಳೂರು ನಗರದ ಹೊರ ವರ್ತುಲ ರಸ್ತೆ (ORR) ಸರ್ಜಾಪುರ ರಸ್ತೆ ಮಾರ್ಗದ ಒತ್ತಡ ನಿವಾರಣೆಗಾಗಿ ಶುಕ್ರವಾರ (ಸೆಪ್ಟೆಂಬರ್ 19)ರಂದು ಗ್ರೇಟರ್ ಬೆಂಗಳೂರು ಆಡಳಿತದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಲ್ಲೇಶ್ವರಂನ ಐ.ಪಿ.ಪಿ ಕೇಂದ್ರದಲ್ಲಿ ಅಧಿಕಾರಿಗಳು, ORRCA ಪ್ರತಿನಿಧಿಗಳು, ಡಬ್ಲ್ಯು.ಆರ್.ಐ ಇಂಡಿಯಾ ತಂಡ, ಟೆಕ್ ಪಾರ್ಕ್ ಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಹಲವು ಪ್ರಸ್ತಾವನೆಗಳನ್ನು ಪರಿಶೀಲಿಸಿದ್ದಾರೆ. ಅದರ ಕೆಲವೊಂದು ಪ್ರಮುಖ ವಿಷಯಗಳು ಇಲ್ಲಿವೆ.
1. ಭೌಗೋಳಿಕ-ಪ್ರಾದೇಶಿಕ ಮತ್ತು ನೇರ ಸಂಚಾರ ವಿಶ್ಲೇಷಣೆಯ ಆಧಾರದ ಮೇಲೆ ಪ್ರದೇಶದ ಸಮಗ್ರ ಅಧ್ಯಯನವನ್ನು ಡಬ್ಲ್ಯು.ಆರ್.ಐ ಇಂಡಿಯಾ ಮತ್ತು ಅಸ್ತ್ರಂ ತಂಡಗಳು ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಕ್ರಮಗಳ ಬಗ್ಗೆ ಪ್ರಸ್ತುತಪಡಿಸಲಾಯಿತು.

2. ಹೊರ ವರ್ತುಲ ರಸ್ತೆ (ORR) ಪ್ರದೇಶದ ರಸ್ತೆಗಳ ಸುಧಾರಣೆ, ಪಾದಚಾರಿಗಳಿಗೆ ಅನುಕೂಲ, ರಸ್ತೆ ಜಾಲದ ವಿಸ್ತರಣೆ, ಬಸ್ ಸೇವೆ ಬಲಪಡಿಸುವ ಕುರಿತು ಚರ್ಚಿಸಲಾಯಿತು.
3. ಪೂರ್ವ ನಗರ ಪಾಲಿಕೆಯ ಪ್ರದೇಶದಲ್ಲಿನ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ (ಗಿಯರ್ ಶಾಲೆ ರಸ್ತೆ, ಮದರ್‌ಹುಡ್ ರಸ್ತೆ ಸೇರಿದಂತೆ) ತಕ್ಷಣವೇ ಕ್ರಮ ಕೈಗೊಂಡು ರಸ್ತೆಗಳಲ್ಲಿ ಗುಂಡಿ ಮುಕ್ತಗೊಳಿಸುವುದು ಮತ್ತು ವಾಹನಗಳ ನಿರಂತರ ಸಂಚಾರಕ್ಕೆ ಅಡ್ಡಿಯಾಗಿರುವ ಅತಿಕ್ರಮಣ ತೆರವುಗೊಳಿಸುವುದಕ್ಕೆ ಆದ್ಯತೆ ನೀಡಲಿದೆ ಎಂದು ಹೇಳಲಾಗಿದೆ.
4. ಪೂರ್ವ ನಗರ ಪಾಲಿಕೆಯು ಇಬ್ಲೂರು ಜಂಕ್ಷನ್‌ನಲ್ಲಿ ಸುರಕ್ಷಾ 75 ಅಡಿಯಲ್ಲಿ ಕಾಮಗಾರಿ ವೇಗಗೊಳಿಸಲಿದೆ. ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್ ವಿಸ್ತರಿಸಲಾಗುತ್ತದೆ.
5. ದಕ್ಷಿಣ ನಗರ ಪಾಲಿಕೆಯು ಹರಳೂರು ರಸ್ತೆ, ಕೈಕೊಂಡ್ರಹಳ್ಳಿ ರಸ್ತೆ, ಹೊಸ ರಸ್ತೆಗಳನ್ನು ಗುಂಡಿಗಳಿಲ್ಲದ ರಸ್ತೆಗಳನ್ನಾಗಿ ಮಾಡುವುದು ಹಾಗೂ ಅತಿಕ್ರಮಣ ತೆರವುಗೊಳಿಸಿ ನಿರಂತರ ವಾಹನ ಸಂಚಾರಕ್ಕೆ ಸೌಲಭ್ಯ ಒದಗಿಸಲು ಗಮನಹರಿಸುತ್ತದೆ.
6. ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿನ ಬಸ್ ನಿಲ್ದಾಣಗಳನ್ನು ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಮಾಡಿ, ಅತಿಕ್ರಮಣಗಳಿಂದ ಮುಕ್ತಗೊಳಿಸುವುದು.
7. ಬಿಎಂಟಿಸಿ ಎಂ.ಎಫ್ 1ಸಿ ಫೀಡರ್ ಬಸ್ಸನ್ನು ಕೆ.ಆರ್. ಪುರ ಮೆಟ್ರೋ ನಿಲ್ದಾಣದಿಂದ (ಪರ್ಪಲ್ ಲೈನ್) ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದವರೆಗೆ (ಯೆಲ್ಲೋ ಲೈನ್) ವಿಸ್ತರಿಸುವುದು.
8. ಬಿಎಂಟಿಸಿ ಓ.ಆರ್.ಆರ್ ಪ್ರದೇಶದಲ್ಲಿ ಹೆಚ್ಚುವರಿ ಸೇವೆಗಳನ್ನು ನಡೆಸಲು ಅಗತ್ಯವಾದ ವಿಜಿಎಫ್ (VGF) ಬೆಂಬಲಕ್ಕಾಗಿ ಪ್ರಸ್ತಾವನೆ ಸಲ್ಲಿಸುವುದು
9. ಬಸ್ ಪ್ರೈಯಾರಿಟಿ ಲೇನ್ ಪುನಶ್ಚೇತನದ ಸಾಧ್ಯತಾ ಅಧ್ಯಯನವನ್ನು ಶೀಘ್ರದಲ್ಲೇ BMRCL, DULT ಸಹಯೋಗದಲ್ಲಿ ನಡೆಸುವುದು.
10. ಮಧ್ಯಮಾವಧಿಯಲ್ಲಿ ಸರ್ಜಾಪುರ ರಸ್ತೆಯ ಸಮಗ್ರ ಅಭಿವೃದ್ಧಿ, ಎರಡೂ ಬದಿಗಳ ದ್ವಿತೀಯ ರಸ್ತೆ ಜಾಲ, ಜಂಕ್ಷನ್‌ಗಳ ಸುಧಾರಣೆ ಹಾಗೂ ಕ್ಯಾರೇಜ್‌ವೇ ಸರಳೀಕರಣ ಕಾರ್ಯ ಕೈಗೊಳ್ಳುವುದು.
11. ಜಿಬಿಎ ಮುಖ್ಯ ಆಯುಕ್ತರು ಕ್ರಿಯಾಶೀಲ ಅಂಶಗಳ ಪ್ರಗತಿಯನ್ನು ಹತ್ತಿರದಿಂದ ಗಮನಿಸಲು ಪ್ರತಿ ಎರಡು ವಾರಕ್ಕೊಮ್ಮೆ ವಿಮರ್ಶೆ ನಡೆಸಲಿದ್ದಾರೆ.
ಈ ವೇಳೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್, ಮುಖ್ಯ ಅಭಿಯಂತರರು, CTMO BMTC, DGMO, BMRCL, ACP Planning, ಬೆಂಗಳೂರು ಸಂಚಾರಿ ವಿಭಾಗ, ಪ್ರೈಟೆಕ್ ಹಾಗೂ ಇಕೋಸ್ಪೇಸ್ ಟೆಕ್ ಪಾರ್ಕ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.












Click it and Unblock the Notifications