Israel-Iran War: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 15 ವಿಮಾನಗಳ ಹಾರಾಟ ದಿಢೀರ್ ರದ್ದು, ಪ್ರಯಾಣಿಕರ ಪರದಾಟ
ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ಭೀಕರ ಯುದ್ಧದ ಬಿಸಿ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ಹೌದು, ಮಧ್ಯಪ್ರಾಚ್ಯದಲ್ಲಿನ ಯುದ್ಧದ ಉದ್ವಿಗ್ನತೆಯಿಂದಾಗಿ ವಾಯುಪ್ರದೇಶವನ್ನು ಮುಚ್ಚಿರುವ ಪರಿಣಾಮ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ದಿಢೀರ್ ಆಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ವಿದೇಶಕ್ಕೆ, ಅದರಲ್ಲೂ ಮುಖ್ಯವಾಗಿ ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಬೇಕಿದ್ದ ಸಾವಿರಾರು ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಪರದಾಡುವಂತಾಗಿದೆ.
ರದ್ದಾದ ವಿಮಾನಗಳೆಷ್ಟು?
ಮೂಲಗಳ ಪ್ರಕಾರ, ಗಲ್ಫ್ ರಾಷ್ಟ್ರಗಳಾದ ದುಬೈ (Dubai), ದೋಹಾ, ಅಬುದಾಬಿ, ಜಿದ್ದಾ ಮತ್ತು ದಮಾಮ್‌ಗೆ ಬೆಂಗಳೂರಿನಿಂದ ತೆರಳಬೇಕಿದ್ದ ಒಟ್ಟು ಆರು ವಿಮಾನಗಳು ರದ್ದಾಗಿವೆ. ಅದೇ ರೀತಿ, ಆ ಭಾಗದಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಒಂಬತ್ತು ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಒಟ್ಟಾರೆಯಾಗಿ 15 ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಏರ್‌ಲೈನ್ಸ್ ಸಂಸ್ಥೆಗಳು ಮುಂದಿನ ಆದೇಶದವರೆಗೆ ಈ ಮಾರ್ಗಗಳಲ್ಲಿ ಕಾರ್ಯಾಚರಣೆಯನ್ನು ತಡೆಹಿಡಿದಿವೆ.

1533ಕ್ಕೂ ಹೆಚ್ಚು ಪ್ರಯಾಣಿಕರು ಕಂಗಾಲು
ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿ, ತಮ್ಮ ನಿಗದಿತ ಕೆಲಸಗಳಿಗಾಗಿ, ಉದ್ಯೋಗಕ್ಕಾಗಿ ಹಾಗೂ ಪ್ರವಾಸಕ್ಕಾಗಿ ಅರಬ್ ರಾಷ್ಟ್ರಗಳಿಗೆ ಹೊರಟಿದ್ದ 1533 ಕ್ಕೂ ಹೆಚ್ಚು ಪ್ರಯಾಣಿಕರು ಇದೀಗ ವಿಮಾನ ನಿಲ್ದಾಣದಲ್ಲಿ ಕಂಗಾಲಾಗಿದ್ದಾರೆ. ವಿಮಾನ ರದ್ದಾದ ಮಾಹಿತಿ ವಿಮಾನ ನಿಲ್ದಾಣಕ್ಕೆ ಬಂದ ಬಳಿಕವಷ್ಟೇ ಹಲವರಿಗೆ ತಿಳಿದಿದ್ದು, ಇದು ಪ್ರಯಾಣಿಕರ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಯಿತು. ವೀಸಾ ಅವಧಿ ಮುಗಿಯುತ್ತಿರುವವರು ಮತ್ತು ತುರ್ತು ಕೆಲಸದ ಮೇಲೆ ತೆರಳಬೇಕಿದ್ದವರು ಏರ್‌ಲೈನ್ಸ್ ಸಿಬ್ಬಂದಿ ಜೊತೆ ತಮ್ಮ ಅಳಲು ತೋಡಿಕೊಂಡ ಘಟನೆಗಳೂ ವರದಿಯಾಗಿವೆ.
ಪ್ರಯಾಣಿಕರ ನೆರವಿಗೆ ನಿಂತ ಕೆಐಎಎಲ್ ಆಡಳಿತ ಮಂಡಳಿ
ದಿಢೀರ್ ರದ್ದತಿಯಿಂದಾಗಿ ಹೈರಾಣಾಗಿರುವ ಪ್ರಯಾಣಿಕರ ಪರದಾಟವನ್ನು ಅರಿತ ವಿಮಾನ ನಿಲ್ದಾಣದ (KIAL) ಸಿಬ್ಬಂದಿ, ತಕ್ಷಣವೇ ಮಾನವೀಯತೆ ಮೆರೆದಿದ್ದಾರೆ. ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ಪ್ರಯಾಣಿಕರಿಗೆ ಕುಡಿಯುವ ನೀರು, ತಿಂಡಿ ಮತ್ತು ಬಿಸ್ಕತ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಪ್ರಯಾಣಿಕರಿಗೆ ನಿಖರವಾದ ಮಾಹಿತಿ ನೀಡಲು, ಟಿಕೆಟ್ ಮರುಪಾವತಿ ಅಥವಾ ಪರ್ಯಾಯ ವಿಮಾನಗಳ ವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಲು ವಿಶೇಷ ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ.
ಅನೇಕ ಪ್ರಯಾಣಿಕರು ಅನಿವಾರ್ಯವಾಗಿ ತಮ್ಮ ವಿಮಾನ ಟಿಕೆಟ್‌ಗಳನ್ನು ರದ್ದುಪಡಿಸಿ, ಭಾರಿ ನಿರಾಸೆಯಿಂದ ತಮ್ಮ ಮನೆಗಳಿಗೆ, ಊರುಗಳಿಗೆ ಮರಳುತ್ತಿದ್ದಾರೆ. ವಿಮಾನಯಾನ ಸಂಸ್ಥೆಗಳು ಕೂಡ ತಮ್ಮ ಪ್ರಯಾಣಿಕರಿಗೆ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ನಿರಂತರವಾಗಿ ಮಾಹಿತಿಯನ್ನು ರವಾನಿಸುತ್ತಿವೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಕ್ಷಿಪಣಿ ದಾಳಿ ಮತ್ತು ಪ್ರತಿದಾಳಿಯ ಭೀತಿಯಿಂದಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ರಾಷ್ಟ್ರಗಳು ತಮ್ಮ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿವೆ. ಈ ಕಾರಣದಿಂದಾಗಿ ಭಾರತದಿಂದ ಪಶ್ಚಿಮದ ಕಡೆಗೆ ಹಾರುವ ಬಹುತೇಕ ವಿಮಾನಗಳು ರದ್ದಾಗಿವೆ. ಸುರಕ್ಷತೆಯ ದೃಷ್ಟಿಯಿಂದ ವಿಮಾನಯಾನ ಸಂಸ್ಥೆಗಳು ಈ ಕಠಿಣ ನಿರ್ಧಾರ ಕೈಗೊಂಡಿವೆ.












Click it and Unblock the Notifications