ಕೋಟಿ ಕೋಟಿ ತೆರಿಗೆ ಬಾಕಿಯಿಂದ ಮಂತ್ರಿ ಸ್ಕ್ವಾರ್‌ಗೆ ಬೀಗ: ವರ್ಷಾಂತ್ಯದ ವೀಕೆಂಡ್‌ನಲ್ಲಿ ಮಾಲ್ ಕಥೆಯೇನು?
ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವಾರ್ ಮಾಲ್‌ಗೆ ಬೀಗ ಹಾಕಲಾಗಿದೆ. ಬರೋಬ್ಬರಿ ಐವತ್ತು ಕೋಟಿಗೂ ಅಧಿಕ ರೂಪಾಯಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ.
ಕಳೆದ ಎರಡು ದಿನಗಳಿಂದ ಮಂತ್ರಿ ಸ್ಕ್ವಾರ್ ಮಾಲ್‌ಗೆ ಬೀಗ ಹಾಕಲಾಗಿದ್ದು, ಗ್ರಾಹಕರು ಭೇಟಿ ನೀಡಿ ವಾಪಸ್ ಆಗುತ್ತಿದ್ದಾರೆ. ಬುಧವಾರ ಹಾಗೂ ಗುರುವಾರ ಎರಡೂ ದಿನಗಳು ಮಾಲ್ ಬಂದಾಗಿದ್ದು, ವೀಕೆಂಡ್‌ನಲ್ಲಿ ಮಾಲ್‌ನ ಕಥೆಯೇನು..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಈ ಬಾರಿ ವರ್ಷಾಂತ್ಯ ಹಾಗೂ ವಾರಾಂತ್ಯ ಒಂದೇ ದಿನ ಬಂದಿದ್ದು, ಮಾಲ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಸದ್ಯ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದ್ದು, ಮಾಲ್‌ನಲ್ಲಿರುವ ಅಂಗಡಿಗಳ ವಹಿವಾಟಿಗೂ ಕತ್ತರಿ ಬೀಳಲಿದೆ.

ಮಂತ್ರಿ ಮಾಲ್‌ಗೆ ಮೆಟ್ರೋ ಹಾಗೂ ರಸ್ತೆ ಎರಡು ಮಾರ್ಗಗಳು ಸುಲಭವಾಗಿದ್ದು, ಹೀಗಾಗಿ ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡಿ ಸಮಯ ಕಳೆಯುತ್ತಾರೆ. ಮಲ್ಲೇಶ್ವರಂನಲ್ಲಿ ಶಾಂಪಿಂಗ್‌ಗೆ ಬರುವವರು ಸಹ ಒಮ್ಮೆ ಮಂತ್ರಿ ಮಾಲ್‌ಗೆ ಭೇಟಿ ನೀಡಿಯೇ ನೀಡುತ್ತಾರೆ. ಹೀಗಾಗಿ ವರ್ಷಾಂತ್ಯ ಹಾಗೂ ವಾರಾಂತ್ಯದ ನಿಮ್ಮ ಪ್ಲಾನ್‌ನಲ್ಲಿ ಮಂತ್ರಿ ಸ್ಕ್ವಾರ್ ಮಾಲ್ ಭೇಟಿ ಇದ್ದರೆ ಸೂಕ್ತ ಮಾಹಿತಿಯನ್ನು ಪಡೆಯದೇ ಹೊರಡಬೇಡಿ.
ಕಳೆದೆರಡು ದಿನಗಳಿಂದ ಬಂದ್ ಆಗಿರುವ ಮಾಲ್ ನಾಳೆಯಿಂದ ಆರಂಭವಾಗಬಹುದು ಅಥವಾ ಇದೇ ಪರಿಸ್ಥಿತಿ ಮುಂದುವರಿಯಬಹುದು. ಹೀಗಾಗಿ ಪ್ಲಾನ್ ಮಾಡುವ ಮುನ್ನ ಸೂಕ್ತ ಮಾಹಿತಿಯನ್ನು ಪಡೆದುಕೊಂಡಿರಿ. ಮಾಲ್ ಮತ್ತೆ ಓಪನ್ ಮಾಡುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಾಗಲೀ, ಮಾಲ್ ಆಡಳಿತ ಮಂಡಳಿಯಾಗಲಿ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ.

ಮಂತ್ರಿ ಮಾಲ್ ಬಂದ್ ಆಗಿದ್ದೇಕೆ..?
2019-20ರಿಂದ 50.63 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದಾರೆ. ಮಂತ್ರಿ ಮಾಲ್ ಆಡಳಿತ ಮಂಡಳಿಯ ಅಭಿಷೇಕ್ ಪ್ರೊಪ್‌ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹಾಗೂ ಹಮಾರಾ ಶೆಲ್ಟರ್ಸ್ ಪ್ರೈ. ಲಿ. ಕಂಪನಿಗೆ ಹಲವು ಸಲ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದರೂ ತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ.
ಹೀಗಾಗಿ ಬುಧವಾರ ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಮಂತ್ರಿ ಮಾಲ್‌ನ ಒಳಗಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿ, ಮಳಿಗೆಗಳನ್ನು ಮುಚ್ಚಿಸಿ ಮಾಲ್‌ನ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದಾರೆ. ಇನ್ನು ಈ ಹಿಂದೆಯೂ ತೆರಿಗೆ ಪಾವತಿಸದ ಕಾರಣಕ್ಕೆ ಮೂರ್ನಾಲ್ಕು ಬಾರಿ ಮಾಲ್ಗೆ ಬೀಗ ಹಾಕಲಾಗಿತ್ತು. 2018ರಿಂದಲೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್ ಮಾಲೀಕರ ಮೇಲೆ ಬಿಬಿಎಂಪಿಯ ಕ್ರಮ ತೆಗೆದುಕೊಂಡಿತ್ತು.












Click it and Unblock the Notifications