IPL Matches in Bengaluru: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ- ಮಾರ್ಗ, ದಿನಾಂಕಗಳ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್, 14: ಇದೀಗ ಐಪಿಎಲ್ ಹಬ್ಬ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ದಿನದಂದು ಹೆಚ್ಚುವರಿ ಬಸ್‌ಗಳನ್ನು ಬಿಡಲು ಬಿಎಂಟಿಸಿ ನಿರ್ಧರಿಸಿದೆ. ಹಾಗಾದರೆ ಸಮಯ, ಮಾರ್ಗಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನ ಜೀವನಾಡಿ ಸಾರಿಗೆಯಂತಲೇ ಹೆಸರುವಾಗಿರುವ ಬಿಎಂಟಿಸಿ ಆಗಾಗ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಇನ್ನು ಇದೀಗ ಐಪಿಎಲ್ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ದಿನದಂದು ವಿಶೇಷ ಬಸ್‌ಗಳನ್ನು ಬಿಡಲು ನಿರ್ಧರಿಸಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್‌ಗಳನ್ನು ಬಿಡಲು ಬಿಎಂಟಿಸಿ ನಿರ್ಧರಿಸಿದೆ. ಏಪ್ರಿಲ್ 15, ಮೇ 04, 12 ಮತ್ತು ಮೇ 18ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ.
ಈ ದಿನಗಳಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣಕ್ಕೆ, ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣಕ್ಕೆ, ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ, ನಾಗವಾರ-ಟ್ಯಾನರಿ ರಸ್ತೆ ಮೂಲಕ ಆರ್.ಕೆ.ಹೆಗಡೆ ನಗರಕ್ಕೆ, ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ, ಎಂಟಿಸಿಟಿ-ನಾಯಂಡಹಳ್ಳಿ ಮೂಲಕ ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್‌ಗೆ, ಹೆಣ್ಣೂರು ರಸ್ತೆ ಮೂಲಕ ಬಾಗಲೂರಿಗೆ ಬಸ್‌ಗಳು ಸಂಚಾರ ಮಾಡಲಿವೆ.
ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ನಲಮಂಗಲ, ಯಲಹಂಕ 5ನೇ ಹಂತ, ಹೊಸಕೋಟೆಗಳಿಗೂ ಹೆಚ್ಚುವರಿ ಬಸ್ ಸೇವೆ ಇರಲಿದೆ ಎಂದು ಬಿಎಂಟಿಸಿ ಸಾರ್ವಜನಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಉಪನಗರ ರೈಲು ಯೋಜನೆ ಕಾಮಗಾರಿ ಅಪ್ಡೇಟ್: ಬೆಂಗಳೂರು ಬಹುನಿರೀಕ್ಷಿತ ಯೋಜನೆಯಾದ ಉಪನಗರ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉಪನಗರ ರೈಲು ಯೋಜನೆ ನಾನಾ ಕಾರಣಾಂತರಗಳಿಂದ ಆಮೆಗತಿಯಲ್ಲಿ ಸಾಗಿತ್ತು. ಇದೀಗ ಈ ಯೋಜನೆ ಇದೀಗ ಭರದಿಂದ ಸಾಗುತ್ತಿದೆ ಎಂದು ತಿಳಿದುಬಂದಿದೆ. ನಾಲ್ಕು ಮಾರ್ಗದ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಆರಂಭ ಆಗಿದ್ದು, ಈ ಮಾರ್ಗದಲ್ಲಿರುವ ವಸತಿ, ವಾಣಿಜ್ಯ ಕಟ್ಟಡಗಳನ್ನು ಸಂಪೂರ್ಣ ಮತ್ತು ಭಾಗಶಃ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಶುರುವಾಗಿದೆ.
ಈ ಯೋಜನೆಗೆ ಒಟ್ಟು 148 ಕಿಲೋ ಮೀಟರ್ ಮಾರ್ಗದಲ್ಲಿ ಸುಮಾರು 650 ವಸತಿ, ವಾಣಿಜ್ಯ ಮತ್ತು ಇತರ ಸಣ್ಣಪುಟ್ಟ ಕಟ್ಟಡಗಳನ್ನು ಸಂಪೂರ್ಣ ಅಥವಾ ಭಾಗಶಃ ಕೆಡವಲು ನಿರ್ಧರಿಸಲಾಗಿದೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ ವಿಸ್ತರಿಸಿರುವ ಕಾರಿಡಾರ್-2ರ ಮಾರ್ಗದಲ್ಲಿನ 289 ಕಟ್ಟಡಗಳನ್ನು ಕೆಡವುವ ಕಾರ್ಯವನ್ನು ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ- ರೈಡ್) ಈಗಾಗಲೇ ಶುರು ಮಾಡಿದೆ. ಇನ್ನು ಮುಂದಿನ ಎರಡು ತಿಂಗಳಲ್ಲಿ ನಾಲ್ಕೂ ಮಾರ್ಗದ ಕಟ್ಟಡಗಖನ್ನು ಕೆಡವುವ ಕಾರ್ಯ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.
ಹೀಲಲಿಗೆಯನ್ನು ರಾಜಾನುಕುಂಟೆಗೆ ಸಂಪರ್ಕಿಸುವ ಕಾರಿಡಾರ್-4ರಲ್ಲಿ 140 ಕಟ್ಟಡ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಕಾರಿಡಾರ್-3 ಮತ್ತು ಮೆಜೆಸ್ಟಿಕ್‌ನಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್-1ನಲ್ಲಿ ಕ್ರಮವಾಗಿ 135 ಮತ್ತು 85 ಕಟ್ಟಡಗಳ ಪೈಕಿ ಕೆಲವನ್ನು ಭಾಗಶಃ ಹಾಗೂ ಇನ್ನೂ ಕೆಲವನ್ನು ಸಂಪೂರ್ಣ ಕೆಡವಲು ತೀರ್ಮಾಣ ಮಾಡಲಾಗಿದೆ.
ಕೆ-ರೈಡ್ ನಿಲ್ದಾಣ, ಡಿಪೊ ಮತ್ತು ಹಳಿ ನಿರ್ಮಾಣಕ್ಕೆ ರೈಲ್ವೆ ಭೂಮಿ, ಸರ್ಕಾರಿ ಭೂಮಿ, ಅರಣ್ಯ ಭೂಮಿ ಮತ್ತು ಖಾಸಗಿ ಭೂಮಿಯನ್ನು ಒಳಗೊಂಡಿರುವ 233 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕಾರಿಡಾರ್-2ರ ಭಾಗ ಆಗಿರುವ ಮತ್ತಿಕೆರೆ ಮತ್ತು ಎಂಆರ್ ಜಯರಾಮ್ ಕಾಲೊನಿ ಭಾಗದಲ್ಲಿ ಒಂದು ಹೆಕ್ಟೇರ್‌ಗೂ ಹೆಚ್ಚು ಭಾಗ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.
ಇನ್ನು ಇಲ್ಲಿ ಎತ್ತರಿಸಿದ ಮಾರ್ಗದಲ್ಲಿ ರೈಲು ಸಂಚರ ಮಾಡುತ್ತಿದ್ದು, ಇಲ್ಲಿ 143 ಕಟ್ಟಡ ಮತ್ತು 650 ನಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಮನೆಗಳನ್ನು ನೆಲಸಮ ಮಾಡುವ ಅಗತ್ಯವಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಅಪಾಯವನ್ನು ತಡೆಯಲು ವಯಾಡಕ್ಟ್ ವಿಭಾಗಗಳ ನಿರ್ಮಾಣದ ಸಮಯದಲ್ಲಿ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದೆ.
ಮತ್ತೊಂದೆಡೆ ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ಪ್ರದೇಶವನ್ನು ಅವಲಂಬಿಸಿ (ವಸತಿ/ವಾಣಿಜ್ಯ) 25,000 ರಿಂದ 45,000 ರೂಪಾಯಿ ರವರೆಗೆ ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಅನಾನುಕೂಲ ಭತ್ಯೆ 70,000 ರೂಪಾಯಿ ಪ್ರತ್ಯೇಕವಾಗಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ












Click it and Unblock the Notifications