Narayan Murthy: ಬೇರೆ ಸಿಟಿ ಬಿಟ್ಟು ಬೆಂಗಳೂರಿಗೆ ಬರುವವರ ಸಂಖ್ಯೆ ಈ ಕಾರಣಕ್ಕೆ ಹೆಚ್ಚಾಗಲಿದೆ: ನಾರಾಯಣಮೂರ್ತಿ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಯುವಕರು 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎನ್ನುವುದನ್ನು ಪ್ರತಿಪಾದಿಸುತ್ತಿದ್ದಾರೆ. ಇದೀಗ ಬೆಂಗಳೂರಿನ ಹವಾಮಾನ ಹಾಗೂ ಇದರಿಂದ ಆಗುವ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಹವಾಮಾನ ವಿಪರೀತವಾಗಿ ಬದಲಾಗುತ್ತಿದೆ. ಇದರಿಂದ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ವಲಸೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದಾರೆ. ದೇಶದಲ್ಲಿ ನಗರ ಭಾಗಗಳಿಗೆ ವಲಸೆ ಹೋಗುವುದನ್ನು ರಾಜ್ಯ ಸರ್ಕಾರಗಳು ತಪ್ಪಿಸುವ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಾರಾಯಣ ಮೂರ್ತಿ ಅವರು, ದೇಶದ ವಿವಿಧ ಭಾಗದಲ್ಲಿ ಹವಾಮಾನ ವೈಪರೀತ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾರಾಯಣ ಮೂರ್ತಿ ಅವರು ಪರೋಕ್ಷವಾಗಿ ದೆಹಲಿಯ ಹವಾಮಾನದ ಬಗ್ಗೆ ಆತಂಕ ವ್ಯಕ್ತಪಡಿಸಿರುವಂತಿದೆ. ಯಾಕೆಂದರೆ ಕಳೆದ ಎರಡು ದಶಕದ ಅವಧಿಯಲ್ಲಿ ದೆಹಲಿ ಇನ್ನಿಲ್ಲದಷ್ಟು ವಾಯುಮಾಲಿನ್ಯಗೊಂಡಿದೆ. ಅಂದಾಜು ಶೇ60ಕ್ಕೂ ಹೆಚ್ಚು ಜನ ಇಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದೆಹಲಿ ಚಳಿಗಾಲದಲ್ಲಂತೂ ಅಕ್ಷರಶಃ ಗ್ಯಾಸ್ ಚೇಂಬರ್‌ನಂತೆ ಬದಲಾಗುತ್ತದೆ.

ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸುಡುವ ಕೃಷಿ ತ್ಯಾಜ್ಯದಿಂದ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ವಿಪರೀತ ವಾಯು ಮಾಲಿನ್ಯ ನಿರ್ಮಾಣವಾಗುತ್ತದೆ. ಜನ ಉಸಿರಾಡುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನು ಮುಂಬೈ ಈಗಾಗಲೇ ವಿಪರೀತ ದಟ್ಟಣೆ ಸಮಸ್ಯೆಯನ್ನು ಎದುರಿಸುತ್ತಿದೆ. ಮಳೆಗಾಲದಲ್ಲಿ ಮುಂಬೈನ ಕೆಲವು ಪ್ರದೇಶಗಳು ದಶಕಗಳ ಕಾಲದಿಂದ ಸಂಕಷ್ಟವನ್ನು ಎದುರಿಸುತ್ತಿವೆ. ಅಲ್ಲದೆ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಬಿಸಿಲು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಿಪರೀತ ಚಳಿ ಹಾಗೂ ವಿಪರೀತ ಬಿಸಿಲಿಗೆ ದೆಹಲಿ ಸೇರಿದಂತೆ ಉತ್ತರ ಭಾರತ ಸಾಕ್ಷಿಯಾಗುತ್ತಿದೆ.
ಇದೀಗ ನಾರಾಯಣ ಮೂರ್ತಿ ಅವರು ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ವಲಸೆ ವಿಪರೀತವಾಗಲಿದೆ ಎಂದಿದ್ದಾರೆ. ಬೆಂಗಳೂರು ಮಾತ್ರವಲ್ಲ. ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರ ಭಾಗಕ್ಕೆ ದೇಶದ ಜನ ವಲಸೆ ಬರಲಿದ್ದಾರೆ ಎಂದಿದ್ದಾರೆ. ಹೌದು, ಬೆಂಗಳೂರು, ಹೈದರಾಬಾದ್ ಹಾಗೂ ಪುಣೆ ನಗರಗಳಿಗೆ ಜನ ವಲಸೆ ಬರುವ ಪ್ರಮಾಣ ಹೆಚ್ಚಾಗಲಿದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಈ ನಗರಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಇನ್ನು ಈಗಾಗಲೇ ಬೆಂಗಳೂರು ಸೇರಿದಂತೆ ಹೈದರಾಬಾದ್ ಹಾಗೂ ಪುಣೆ ನಗರಗಳಿಗೆ ವಲಸೆ ಬರುವವರ ಸಂಖ್ಯೆ ವಿಪರೀತವಾಗಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಲಸೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಟ್ರಾಫಿಕ್ ಜಾಮ್ ಹಾಗೂ ಮೂಲಸೌಕರ್ಯ ಒತ್ತಡ ಹೆಚ್ಚಳವಾಗಿದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಅಭಿವೃದ್ಧಿ ಆಗುತ್ತಿದ್ದರೂ ಒತ್ತಡ ಹೆಚ್ಚಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಟಯರ್ ಟು ಸಿಟಿ (ಎರಡನೇ ಹಂತದ ನಗರಗಳ) ಅಭಿವೃದ್ಧಿಪಡಿಸಬೇಕು ಎನ್ನುವ ಬೇಡಿಕೆ ಇದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.
ನಾರಾಯಣ ಮೂರ್ತಿ ಅವರ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ವಲಸೆ ಸಮಸ್ಯೆ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬೆಂಗಳೂರಿಗೆ ಬರಲಿದ್ದಾರೆ ಎನ್ನುವುದು ಆತಂಕ ಮೂಡಿಸಿದೆ.












Click it and Unblock the Notifications