ಈ ಬಾರಿ ಇಂದಿರಾ ನಗರದಲ್ಲೂ ಸಲೀಸಲ್ಲ ಹೊಸ ವರ್ಷದ ಪಾರ್ಟಿ
ಬೆಂಗಳೂರು, ಡಿಸೆಂಬರ್ 30: ಇಂದಿರಾ ನಗರ ನಿವಾಸಿಗಳು ವಾರದ ಹಿಂದಷ್ಟೇ ನಡೆಸಿದ ಹೋರಾಟ ಅಕ್ರಮ ಪಬ್ ಗಳನ್ನು ಮುಚ್ಚಿಸುವಂತೆ ಮಾಡಿರುವ ಬೆನ್ನಲ್ಲೇ ಹೊಸ ವರ್ಷಾಚರಣೆ ನೆಪದಲ್ಲಿ ಕುಡಿದು ಗದ್ದಲ ಮಾಡುವುದು ಹಾಗೂ ಅನುಚಿತವಾಗಿ ವರ್ತಿಸುವಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಇದೀಗ ಅಲ್ಲಿನ ನಿವಾಸಿಗಳು ಪೊಲೀಸರ ಮೊರೆ ಹೋಗಿದ್ದಾರೆ.
ಇಂದಿರಾನಗರದ ವಿವಿಧ ಎಂಟು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು 'ನಾನು ಇಂದಿರಾ ನಗರ ಬದಲಾಯಿಸುತ್ತೇನೆ' (ಐ ಚೇಂಜ್ ಇಂದಿರಾನಗರ) ಎಂಬ ವೇದಿಕೆಯಡಿ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಹೊಸ ವರ್ಷಾಚರಣೆ ನೆಪದಲ್ಲಿ ಇಂದಿರಾನಗರದಲ್ಲಿ ಕುಡುಕರ ಅಟಾಟೋಪ ತಪ್ಪಿಸುವಂತೆ ಮನವಿ ಮಾಡಿದ್ದಾರೆ.
ಹೊಸ ವರ್ಷಾಚರಣೆ ನೆಪದಲ್ಲಿ ಇಂದಿರಾನಗರದ ಹಲವು ಪಬ್ ಮತ್ತು ಬಾರ್‌ಗಳಲ್ಲಿ ನಡೆಯುವ ಸಂಗೀತದ ಹಾವಳಿಯಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಕಾನೂನಿನಂತೆ ರಾತ್ರಿ ೧೦ರ ನಂತರ ೪೫ ಡಿಬಿಗಿಂತ ಹೆಚ್ಚು ಶಬ್ದ ಮಾಡುವ ಸಂಗೀತ ಕೇಳುವಂತಿಲ್ಲ.

ಅಲ್ಲದೇ ಜನವಸತಿ ಪ್ರದೇಶವಾದ ಇಂದಿರಾನಗರದಲ್ಲಿ ಎಲ್ಲೆಡೆ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಇದರಿಂದ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಅಲ್ಲದೇ ರೂಫ್ ಟಾಪ್ ಬಾರ್‌ಗಳಲ್ಲಿ ನಿಯಮ ಮೀರಿ ಮದ್ಯ ಸೇವನೆ, ಮಾರಾಟ, ಡ್ಯಾನ್ಸ್ ಗದ್ದಲ ನಡೆಯುತ್ತದೆ. ಈ ಬಗ್ಗೆ ಕಾನೂನು ಕ್ರಮ ಹಾಗೂ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳ ಮನವಿ ಮಾಡಿದರು.
ನಿವಾಸಿಗಳ ಮನವಿಗೆ ಸ್ಪಂದಿಸಿದ ಹೆಚ್ಚುವರಿ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಹೊಸ ವರ್ಷದ ಮುನ್ನಾದಿನ ರಾತ್ರಿ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು. ನಿಯಮ ಮೀರಿ ಸಂಗೀತ ಕೇಳುವುದು, ಮದ್ಯ ಸೇವನೆ ಮಾಡುವುದು ಮುಂತಾದ ಅಕ್ರಮಗಳನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೊಲೀಸ್ ಮೂಲಗಳ ಪ್ರಕಾರ, ಈಗಾಗಲೇ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಭಾರಿ ಮುಂಜಾಗ್ರತೆ ಕೈಗೊಂಡಿರುವ ಕಾರಣ ಈ ಬಾರಿ ಪಾರ್ಟಿ ಪ್ರೀಯರು ಇಂದಿರಾನಗರದತ್ತ ಹೆಚ್ಚು ಮುಖ ಮಾಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಇಂದಿರಾನಗರ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications