ಬಂದ್ ಮಾಡುವುದು ಸಂವಿಧಾನದ ಉಲ್ಲಂಘನೆ: ಹೈಕೋರ್ಟ್
ಬೆಂಗಳೂರು, ಫೆಬ್ರವರಿ 02: ಬಂದ್ ಮಾಡುವುದು ಕಾನೂನು ಹಾಗೂ ಸಂವಿಧಾನದ ಉಲ್ಲಂಘನೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಬಂದ್ ವಿರುದ್ಧ ನಗರದ ಶ್ರದ್ಧಾ ಪೋಷಕರ ಸಭೆ ಸಂಘಟನೆ ಸಲ್ಲಿಸಿದ್ದ ಪಿಎಲ್‌ಐ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಜಿ.ರಮೇಶ್ ಮತ್ತು ಪಿ.ಎಸ್.ದಿನೇಶ್‌ಕುಮಾರ್ ಅವರ ಜಂಟಿ ವಿಭಾಗೀಯ ಪೀಠ ಬೇರೆಯರ ಜೀವನಕ್ಕೆ ತೊಂದರೆ ಕೊಡುವುದು ಮೂಲಭೂತ ಹಕ್ಕು ಹೇಗೆ ಆಗುತ್ತದೆ ಎಂದು ಖಾರವಾಗಿ ಪ್ರಶ್ನಿಸಿದೆ.
ಸುಪ್ರಿಂ ಕೋರ್ಟ್ ತೀರ್ಪಿನನ್ವಯ ಬಂದ್ ಮಾಡುವಂತಿಲ್ಲ ಹಾಗಾಗಿ ಬಂದ್ ಮಾಡಲು ಯಾವುದೇ ಸಂಘಟನೆಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ಜನರ ಜೀವನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಆ ಕರ್ತವ್ಯವನ್ನು ಅದು ನಿರ್ವಹಿಸಲಿ ಎಂದಿದೆ.

ಜನವರಿ 26ರಂದು ನಡೆದ ರಾಜ್ಯ ಬಂದ್‌ನಿಂದ ಜನರಿಗೆ ಹಾಗೂ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆ ಹಾಗೂ ಫೆಬ್ರವರಿ 4ರ ಬಂದ್‌ಗೆ ತಡೆ ನೀಡುವಂತೆ ಶ್ರದ್ಧಾ ಪೋಷಕರ ಸಭೆಯು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ವಾಟಾಳ್ ನಾಗರಾಜ್ ಹಾಗೂ ಕೆಲವು ಸಂಘಟನೆಗಳು ಬಂದ್ ಮಾಡಿಯೇ ತೀರುವುದಾಗಿ ಹೇಳಿದ್ದು, ಬಂದ್ ಆಚರಣೆ ಮಾಡಿದರೆ ಅದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಲಿದೆ. ಬಂದ್ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ. ಅಷ್ಟೆ ಅಲ್ಲದೆ ಬಂದ್ ನಿಂದಾದ ನಷ್ಟ ಪರಿಹಾರಕ್ಕೂ ಹೈಕೋರ್ಟ್ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 4ರಂದು ಬೆಂಗಳೂರಿಗೆ ಬರಲಿದ್ದು, ಮಹದಾಯಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಬಂದ್ ಆಚರಣೆ ಮಾಡಲಾಗುತ್ತಿದೆ.












Click it and Unblock the Notifications