ಯೋಗೀಶ್‌ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್
ಬೆಂಗಳೂರು, ಜನವರಿ 06: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತ್ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸಿಬಿಐಗೆ ನೀಡಿದ್ದ ನಿರ್ದೇಶನವನ್ನು ಮತ್ತೆ ವಿಸ್ತರಿಸಿ ಆದೇಶಿಸಿದೆ.

ನನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.
ವಿನಯ ಕುಲಕರ್ಣಿ ಪರ ಹಾಜರಾಗಿದ್ದ ವಕೀಲರು, ಈ ಪ್ರಕರಣದ ನ್ಯಾಯಿಕ ವಿಚಾರಣೆಯಲ್ಲಿ ಸಿಬಿಐ ಪರವಾದ ವಿಶೇಷ ಪ್ರಾಸಿಕ್ಯೂಟರ್ ಆಗಿ ಹಾಜರಾಗಲು ಗಂಗಾಧರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಅಂತೆಯೇ, ಈ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಸಿಬಿಐ ಪರ ಹಾಜರಿದ್ದ ವಕೀಲರು 'ನನಗೆ ಈ ವಿಷಯ ಈಗಲೇ ತಿಳಿದದ್ದು. ಹಾಗಾಗಿ, ಗಂಗಾಧರ ಶೆಟ್ಟಿ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿರುವ ಬಗ್ಗೆ ಸ್ಪಷ್ಟನೆ ಪಡೆಯಲು ಮತ್ತು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು' ಎಂದು ಕೋರಿದರು.
ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸಿಬಿಐಗೆ ಈ ಮೊದಲಲು ನೀಡಿದ್ದ ನಿರ್ದೇಶನವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ವಿವರ ಇಲ್ಲಿದೆ
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತ್ ಸದಸ್ಯ ಯೋಗೀಶ್ ಗೌಡ ಅವರ ಕೊಲೆ 2016ರ ಜೂನ್‌ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರ ಬಂದರು. ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.












Click it and Unblock the Notifications