ಹಲವು ದಿನಗಳ ಬಳಿಕ ಬೆಂಗಳೂರಲ್ಲಿ ಭಾರಿ ಮಳೆ
ಬೆಂಗಳೂರು, ಜುಲೈ 17 : ರಾಜಧಾನಿ ಬೆಂಗಳೂರು ಮೇಲೆ ವರುಣ ದೇವನ ಕೋಪ ಕಡಿಮೆಯಾಗಿದೆ.
ಹಲವು ದಿನಗಳ ಬಳಿಕ ನಗರದಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ.
ಬುಧವಾರ ಸಂಜೆಯಿಂದಲೇ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ರಾತ್ರಿ 9.30ರ ಸುಮಾರಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಆರಂಭವಾಯಿತು. ಸುಮಾರು ಅರ್ಧಗಂಟೆಗಳ ಕಾಲ ಭಾರಿ ಮಳೆಯಾಗಿದೆ.
ಜಯನಗರ, ಯಶವಂತಪುರ, ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮಳೆಯ ಕಾರಣ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.

ಮುಂಗಾರು ಆರಂಭವಾದ ಬಳಿಕ ವರುಣ ದೇವ ರಾಜಧಾನಿ ಮೇಲೆ ಮುನಿಸಿಕೊಂಡಿದ್ದ. ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗಿರಲಿಲ್ಲ. ಕೋಪ ಇಂದು ಕಡಿಮೆಯಾಗಿದ್ದು, ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ಅಂತ್ಯ ಮತ್ತು ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ : ಬುಧವಾರೆ ಬೆಂಗಳೂರು ಮಾತ್ರವಲ್ಲ ವಿವಿಧ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದೆ. ಧಾರವಾಡದಲ್ಲಿ ಸಂಜೆ ಸುಮಾರು 1 ಗಂಟೆಗಳ ಕಾಲ ಭಾರಿ ಮಳೆ ಸುರಿದಿದೆ. ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿಯೂ ಮಳೆಯಾಗಿದೆ.
ಮುಂಗಾರು ಮಳೆ ಕೊರತೆ ಅನುಭವಿಸಿದ್ದ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಕಳೆದ ನಾಲ್ಕು ದಿನಗಳಿಂದ ಗಾಳಿಯ ಒತ್ತಡ ಕಡಿಮೆಯಾಗಿರುವ ಕಾರಣ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications