ಸುಮ್ನೆ ಮಾತಾಡೋದ್ ಯಾಕೆ? ಮಾಹಿತಿ ಇದ್ದರೆ ಬಹಿರಂಗಪಡಿಸಿ : ಪ್ರತಾಪ್ ಸಿಂಹ ಆರೋಪಕ್ಕೆ ದಿನೇಶ್ ಗುಂಡೂರಾವ್ ತಿರುಗೇಟು
ಬೆಂಗಳೂರು, ಜೂನ್ 13: ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಪಷ್ಟ ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಗುಂಡೂ ರಾವ್, "ಪ್ರತಾಪ್ ಸಿಂಹ ಅವರ ಬಳಿ ಸ್ಪಷ್ಟವಾದ ಮಾಹಿತಿ ಇದ್ದರೆ ಬಹಿರಂಗಪಡಿಸಲಿ, ಸುಮ್ಮನೆ ಹೇಳಿಕೆ ನೀಡುವುದರಲ್ಲಿ ಅರ್ಥವಿಲ್ಲ. ಯಾರು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವುದನ್ನು ಹೇಳಲಿ, ಆ ರೀತಿಯ ಯಾವುದೇ ಘಟನೆ ನಡೆದಿಲ್ಲ, ಒಳ ಒಪ್ಪಂದದ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ದುರಂತದ ಬಗ್ಗೆ ಮರು ತನಿಖೆ ನಡೆಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ನಡೆದ ವೈದ್ಯಕೀಯ ಪರಿಕರಗಳ ಖರೀದಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸೇಡಿನ ರಾಜಕಾರಣ ಮಾಡುವುದಿಲ್ಲ, ಆದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದರೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ
ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನ ಹಾಕಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವಾರದ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಗುಂಡೂರಾವ್, ರಾಜ್ಯದ ಜನರಿಗೆ ಸುಲಲಿತವಾಗಿ ಆರೋಗ್ಯ ಸೇವೆಗಳು ದೊರಕಿಸುವ ನಿಟ್ಟಿನಲ್ಲಿ ಸಿಎಂ ಚರ್ಚಿಸಿದ್ದಾರೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ಎಂ.ಆರ್.ಐ ವ್ಯವಸ್ಥೆಗಳು ದೊರೆಯುವಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಡಯಾಲಿಸಿಸ್, ಅಂಬುಲೆನ್ಸ್ ಸೇವೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು ಎಂದು ಗುಂಡೂರಾವ್ ತಿಳಿಸಿದರು.
ಆರೋಗ್ಯ ವಿಮೆಯಲ್ಲಿ ಸುಧಾರಣೆಗೆ ಕ್ರಮ
ಆರೋಗ್ಯ ವಿಮೆ ಸೇವೆಯಲ್ಲಿ ಸುಧಾರಣೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಆರೋಗ್ಯ ವಿಮೆ ಮೂಲಕ ಚಿಕಿತ್ಸೆ ಪಡೆದ ಬಳಿಕ ಎರಡು ವಾರದೊಳಗೆ ಖಾಸಗಿ ಆಸ್ಪತ್ರೆಗಳಿಗೆ ಬಿಲ್ ಪಾವತಿಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.
ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿದವರು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದರೆ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ರೆಫರೆನ್ಸ್ ಪಡೆದು, ಖಾಸಗಿ ಆಸ್ಪತ್ರೆಗಳಿಗೆ ಹೋಗುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಹೆಲ್ತ್ ಕಾರ್ಡ್‌ಗೆ ಆಯುಷ್ಮಾನ್ ಭಾರತ ಅನ್ನುವ ಬದಲು ಆರೋಗ್ಯ ಕರ್ನಾಟಕ ಕಾರ್ಡ್ ಎಂದು ಕರೆಯುವುದು ಸೂಕ್ತ ಎಂದರು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಿಡಿ ಶೇಕಡ 34 ರಷ್ಟು ಮಾತ್ರ ಹಣಕಾಸಿನ ನೆರವು ನೀಡಲಾಗ್ತಿದೆ. ಆದರ ರಾಜ್ಯ ಸರ್ಕಾರ ಈ ಯೋಜನೆಗೆ ಶೇಕಡ 64 ರಷ್ಟು ಹಣಕಾಸನ್ನು ಒದಗಿಸುತ್ತಿದೆ. ಹೀಗಾಗಿ ಆಯುಷ್ಮಾನ್ ಎನ್ನುವ ಬದಲು ಆರೋಗ್ಯ ಕರ್ನಾಟಕ ಕಾರ್ಡ್ ಎಂದು ಕರೆಯಲು ಮನವಿ ಮಾಡಿದರು.












Click it and Unblock the Notifications