ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಕೋರ್ಟ್ ಅಸ್ತು
ಬೆಂಗಳೂರು, ಜು.16: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆ ನಡೆಸಲು ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ. ಈ ಮೂಲಕ ನಿತ್ಯಾನಂದ ಅವರು ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಸಿಐಡಿಯಿಂದ ವಿಚಾರಣೆ, ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಿದೆ.
ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಹೈಕೋರ್ಟ್ ನ್ಯಾ. ವಿ ಜಗನ್ನಾಥನ್ ಅವರಿರುವ ನ್ಯಾಯಪೀಠ ನೀಡಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರು ಈ ಕೂಡಲೇ ನಿತ್ಯಾನಂದ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ.
ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯನ್ನು ಪುರುಷತ್ವ ಪರೀಕ್ಷೆ, ಧ್ವನಿ ಪರೀಕ್ಷೆ ಸೇರಿದಂತೆ ಇತರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ರಾಮನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಜು.28ರಿಂದ ಸಾಕ್ಷಿ ವಿಚಾರಣೆ ನಡೆಸಬಹುದು. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಪುರುಷತ್ವ ಪರೀಕ್ಷೆ ನಡೆಸುವಂತೆ ಆದೇಶಿಸಿದ ರಾಮನಗರ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಡದಿಯ ನಿತ್ಯಾನಂದ ಸ್ವಾಮೀಜಿ ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. [ನಿತ್ಯಾನಂದ 'ಗುರು' ಪೂರ್ಣಿಮೆಗೆ ಅಡ್ಡಿ]
ಬಿಡದಿ ಧ್ಯಾನದ ಮಠದ ಭಕ್ತಾದಿಗಳು ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ದಾಖಲಿಸಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದ ನಿತ್ಯಾನಂದ ಸ್ವಾಮೀಜಿ, ತಮಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಸಾಮರ್ಥ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಈ ಬಗ್ಗೆ ವಿಸ್ತಾರವಾಗಿ ಅಮೆರಿಕ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಆಶ್ರಮ ವೆಬ್ ತಾಣದಲ್ಲಿ ಪ್ರಕಟಿಸಿದ್ದಾರೆ.
ಆದರೆ, ನಿತ್ಯಾನಂದ ಸ್ವಾಮೀಜಿಯನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸುವಂತೆ ರಾಮನಗರ ಜೆಎಂಎಫ್ಸಿ ಕೋರ್ಟ್ ಜೂನ್ 12. 2012ರಂದು ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ನಿತ್ಯಾನಂದ ಸ್ವಾಮೀಜಿ ಪರ ವಕೀಲರಾದ ಸಿವಿ ನಾಗೇಶ್ ಅವರು, ಜೆಎಂಎಫ್ಸಿ ನ್ಯಾಯಾಲಯದ ಆದೇಶ ರದ್ದು ಮಾಡುವಂತೆ ಕೋರಿದ್ದರು. ಆದರೆ, ತಡೆಯಾಜ್ಞೆ ಮಾತ್ರ ಸಿಕ್ಕಿತ್ತು. ಈಗ ಪುರುಷತ್ವ ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.












Click it and Unblock the Notifications