ಕನ್ನಡಿಗರ ಹಿತಕ್ಕಾಗಿ ಶಪಥ ಮಾಡಿದ ವಿನಯ್ ಗುರೂಜಿ
ಬೆಂಗಳೂರು, ಫೆಬ್ರವರಿ 11: ಕನ್ನಡಿಗರ ಹಿತಕ್ಕಾಗಿ ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಶಪಥಗೈದಿದ್ದಾರೆ.
ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿನಯ್ ಗುರೂಜಿ ಅವರು ವೇದಿಕೆ ಮೇಲೆಯೇ ಶಪಥವೊಂದನ್ನು ಮಾಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿನಯ್ ಗುರೂಜಿ, 'ಸರೋಜಿನಿ ಮಹಿಷಿ ಜಾರಿ ಆಗುವವರೆಗೂ ಒಂದು ಹೊತ್ತಿನ ಊಟವನ್ನು ಬಿಡುತ್ತೇನೆ' ಎಂದು ಶಪಥಮಾಡಿದರು.

ತನು, ಮನ, ಪ್ರಾಣವನ್ನೂ ಅರ್ಪಿಸುತ್ತೇನೆ: ವಿನಯ್ ಗುರೂಜಿ
ಮುಂದುವರೆದು ಮಾತನಾಡಿದ ಅವರು, 'ಕನ್ನಡದ ಎಲ್ಲ ಸಂಘಟನೆಗಳು ಒಟ್ಟಾಗಿ ಇಲ್ಲಿ ಹೋರಾಟ ಮಾಡುತ್ತಿವೆ. ಕನ್ನಡಿಗರ ಪರವಾದ ಈ ಹೋರಾಟಕ್ಕೆ ನನ್ನ ತನು, ಮನ, ಪ್ರಾಣವನ್ನೂ ಅರ್ಪಿಸುತ್ತೇನೆ' ಎಂದರು. ಆ ಮೂಲಕ ಹೋರಾಟಗಾರರಲ್ಲಿ ಸ್ಪೂರ್ತಿ ತುಂಬಿದರು.

ಸಿಎಂ ಜೊತೆ ಮಾತನಾಡುತ್ತೇನೆ: ವಿನಯ್ ಭರವಸೆ
ಆವೇಶಭರಿತವಾಗಿ ಮಾತನಾಡಿದ ವಿನಯ್ ಗುರೂಜಿ, 'ನಾನು ನಿಮ್ಮೊಂದಿಗೆ ಇದ್ದೇನೆ, ನಿಮ್ಮ ಪರವಾಗಿ ಸಿಎಂ ಯಡಿಯೂರಪ್ಪ ಅವರ ಬಳಿ ಮಾತನಾಡುತ್ತೇನೆ, ನಾನು ಈಗಲೇ ಯಾವ ಭರವಸೆಯನ್ನೂ ಕೊಡುವುದಿಲ್ಲ, ಆದರೆ ನನ್ನ ಕರ್ತವ್ಯ ನಾನು ನಿರ್ವಹಿಸುತ್ತೇನೆ' ಎಂದು ಹೇಳಿದರು.

ಕನ್ನಡಿಗರು ವಿಷ ಕುಡಿಯುವ ಪರಿಸ್ಥಿತಿ ಬಂದಿಲ್ಲ: ವಿನಯ್
'ಕನ್ನಡದ ನೆಲ, ಗಾಳಿ, ನೀರು ಆಹಾರ ಬೇಕು ಆದರೆ ಸಂಕಷ್ಟ ಬಂದಾಗ ಹೋರಾಟಕ್ಕೆ ಮಾತ್ರ ಇಳಿಯುವುದಿಲ್ಲ ಎಂದ ಅವರು, ಜನ ಹೋರಾಟಕ್ಕಾಗಿ ವಿಷ ಕುಡಿಯಬಾರದು, ಕನ್ನಡಿಗರು ವಿಷ ಕುಡಿಯುವ ಪರಿಸ್ಥಿತಿ ಬಂದಿಲ್ಲ, ನಾವು ಕನ್ನಡಿಗರು ನಮ್ಮ ಹಕ್ಕಿಗಾಗಿ, ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದರು.

ಯು.ಟಿ.ಖಾದರ್ ಸಹ ಭಾಗಿ
ಇದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮಾತನಾಡಿ, 'ಈ ಪ್ರತಿಭಟನೆಯು ನಮ್ಮ ಯುವಜನತೆಯ ಉದ್ಯೋಗಕ್ಕೆ ಭವಿಷ್ಯದ ದಿನಗಳಲ್ಲಿ ನಾಂದಿಯಾಗಲಿದೆ' ಎಂದರು.

ಫೆಬ್ರವರಿ 13 ರಂದು ಕರ್ನಾಟಕ ಬಂದ್
ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಫೆಬ್ರವರಿ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.












Click it and Unblock the Notifications