ಗೋವಿಂದೇಗೌಡ ಹತ್ಯೆ ಪ್ರಕರಣದ ತನಿಖೆ ಸಿಸಿಬಿಗೆ
ಬೆಂಗಳೂರು, ಜನವರಿ 26 : ಹೆಗ್ಗನಹಳ್ಳಿಯಲ್ಲಿ ನಡೆದ ಮಾಜಿ ಕಾರ್ಪೊರೇಟರ್, ಜೆಡಿಎಸ್ ನಾಯಕ ಗೋವಿಂದೇಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಡಿಸೆಂಬರ್ 9ರಂದು ಹತ್ಯೆ ನಡೆದಿತ್ತು.
ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಪ್ರಕರಣಕ್ಕೆ ಸಂಬಂಧಿದಂತೆ 9 ಮಂದಿಯನ್ನು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ.
ಹೆಗ್ಗನಹಳ್ಳಿ ಮಖ್ಯ ರಸ್ತೆಯಲ್ಲಿ 2017 ರ ಡಿಸೆಂಬರ್ 9ರಂದು ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಹತ್ಯೆ ನಡೆದಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

2016ರಲ್ಲಿ ನಡೆದ ಚಿಕ್ಕತಿಮ್ಮೇಗೌಡ ಎಂಬುವವರ ಕೊಲೆಗೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಗೋವಿಂದೇಗೌಡ ಹತ್ಯೆ ಮಾಡಲಾಗಿತ್ತು. ಹತ್ಯೆ ತನಿಖೆ ನಡೆಸುತ್ತಿದ್ದ ರಾಜಗೋಪಾಲನಗರ ಠಾಣೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದರು.
ಚಿಕ್ಕತಿಮ್ಮೇಗೌಡ ಅವರ ಸಹೋದರ ನಟರಾಜ್, ಲಕ್ಷ್ಮಣ, ದೇವರಾಜ್ ಸೇರಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ. ದೇವರಾಜ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 61ನೇ ಸಿಟಿ ಸಿವಿಲ್ ಕೋರ್ಟ್ ತಿರಸ್ಕರಿಸಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಪ್ರಸನ್ನ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಪ್ರಕರಣ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ.












Click it and Unblock the Notifications