Government Holiday: ಸರ್ಕಾರಿ ರಜೆ: ನಾಳೆ ಬಿಬಿಎಂಪಿಯ ಈ ಸೇವೆಗಳು ಮಾತ್ರ ಇರಲಿವೆ
ಮಾಜಿ ಮುಖ್ಯಮಂತ್ರಿ ಹಾಗೂ ಮುತ್ಸದ್ದಿ ರಾಜಕಾರಣ ಎಸ್.ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಡಿಸೆಂಬರ್ 11ಕ್ಕೆ ಸರ್ಕಾರಿ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಇನ್ನುಳಿದ ಸೇವೆಗಳು ಇರುವುದಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಸ್.ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆ ಅಂದರೆ ಡಿಸೆಂಬರ್ 11ಕ್ಕೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಸೇವೆಗಳು ನಾಳೆ ಇರುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ.
ಎಸ್.ಎಂ ಕೃಷ್ಣ ಅವರ ಗೌರವಾರ್ಥವಾಗಿ ರಾಜ್ಯ ಸರ್ಕಾರವು ಸರ್ಕಾರಿ ರಜೆಯನ್ನು ಘೋಷಿಸಿದ್ದು, ಇದರ ಭಾಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತು ಸೇವೆಗಳಾದ ಮಾರುಕಟ್ಟೆ ಹಾಗೂ ಆರೋಗ್ಯ ಇಲಾಖೆಗಳನ್ನು ಹೊರತುಪಡಿಸಿ, ಇನ್ನುಳಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಅಧೀನ ಕಚೇರಿಗಳನ್ನು ಸಹ ಡಿಸೆಂಬರ್ 11ರಂದು (ಬುಧವಾರ) ಸರ್ಕಾರಿ ಆದೇಶದ ಅನ್ವಯ ಸಾರ್ವತ್ರಿಕ ರಜೆ ಘೋಷಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಬೆಂಗಳೂರಿನಲ್ಲಿ ನಾಳೆ ಮಾರುಕಟ್ಟೆ ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹಾಗೂ ತುರ್ತು ಕೆಲಸಗಳು ಮಾತ್ರ ನಡೆಯಲಿವೆ. ಉಳಿದಂತೆ ಬೆಂಗಳೂರಿನಲ್ಲಿ ದಿನನಿತ್ಯ ನಡೆಯುವ ವಿವಿಧ ಇಲಾಖೆಗಳ ಎಲ್ಲಾ ಕೆಲಸಗಳನ್ನು ಮುಂದೂಡಲಾಗಿರುತ್ತದೆ.

ಕರ್ನಾಟಕ ಕಂಡ ಮೇರು ರಾಜಕಾರಣಿ: ಎಸ್.ಎಂ ಕೃಷ್ಣ ಅವರು ಕರ್ನಾಟಕ ಹಾಗೂ ದೇಶ ಕಂಡ ಮೇರು ರಾಜಕಾರಣಿಯಾಗಿದ್ದಾರೆ. ಕರ್ನಾಟಕ ಹಾಗೂ ಬೆಂಗಳೂರಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಭದ್ರಬುನಾದಿಯನ್ನು ಹಾಕಿಕೊಡುವಲ್ಲಿ ಅವರು ಪಾಂಚಜನ್ಯ ಯಾತ್ರೆಯನ್ನು ಮಾಡಿದ್ದರು. ಈ ಯಾತ್ರೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳುವುದಕ್ಕೆ ಸಹಕಾರಿಯಾಗಿತ್ತು.
ಅಷ್ಟೇ ಅಲ್ಲದೇ ಅದೇ ವರ್ಷ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಯಶಸ್ಸು ಗಳಿಸುವುದಕ್ಕೆ ಎಸ್.ಎಂ ಕೃಷ್ಣ ಅವರು ಕರ್ನಾಟಕದಲ್ಲಿ ನಡೆಸಿದ್ದ ಪಾಂಚಜನ್ಯ ಯಾತ್ರೆ ಪ್ರಮುಖ ಪಾತ್ರವಾಗಿತ್ತು.

ಸವಾಲಿನ ರಾಜಕಾರಣ: ಸಿ.ಎಂ ಆಗಿ ಅಧಿಕಾರ ನಡೆಸಿದ ಅವಧಿಯಲ್ಲಿ ಎಸ್.ಎಂ ಕೃಷ್ಣ ಅವರಿಗೆ ದೊಡ್ಡ ಸವಾಲುಗಳೇ ಎದುರಾಗಿದ್ದವು. ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದವು. ಡಾ. ರಾಜ್‌ಕುಮಾರ್ ಅವರ ಅಪಹರಣದಿಂದಾಗಿ ಕರ್ನಾಟಕದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ ಡಾ. ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಹಾಗೂ ಹೋರಾಟಗಳು ನಡೆದಿದ್ದವು. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುವುದು ಸವಾಲಾಗಿತ್ತು. ನಿರಂತರ ಬಂದ್‌ಗಳಿಂದ ಕರ್ನಾಟಕದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಿತ್ತು. ಈ ಎಲ್ಲಾ ಸವಾಲುಗಳನ್ನು ಎಸ್‌ಎಂ ಕೃಷ್ಣ ಅವರು ಎದುರಿಸಿದ್ದರು.
ಕರ್ನಾಟಕದಲ್ಲಿ ಮಹಿಳಾ ಸಂಘದ ಪರಿಕಲ್ಪನೆಯನ್ನು ಪರಿಚಯಿಸಿದ್ದೇ ಎಸ್‌ಎಂ ಕೃಷ್ಣ ಅವರು ಎನ್ನುತ್ತಾರೆ. ಇನ್ನು ಬೆಂಗಳೂರಿನಲ್ಲಿ ಐಟಿ ಹಬ್ ನಿರ್ಮಣ ಮಾಡಿದ್ದು ಈಗ ಇತಿಹಾಸ. ಅವರು ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈಚೆಗೆ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.












Click it and Unblock the Notifications