GBA ದಾಳಿ: ಅಕ್ರಮ ಪ್ಲಾಸ್ಟಿಕ್ ಸಂಗ್ರಹಣೆ ವಿರುದ್ಧ ₹2 ಲಕ್ಷ ದಂಡ, ನಾಗರಿಕ ಅಹವಾಲಿಗೆ ಫೋನ್-ಇನ್ ಆರಂಭ
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಕ್ರಮ ಪ್ಲಾಸ್ಟಿಕ್ ಸಂಗ್ರಹಣೆ ಮಾಡುವವರ ವಿರುದ್ಧ ಸಮರಕ್ಕೆ ಮುಂದಾಗಿದೆ. ಗೋವಿಂದರಾಜನಗರ ಕ್ಷೇತ್ರದ ವಾರ್ಡ್ 126ರಲ್ಲಿ ಅಕ್ರಮ ಪ್ಲಾಸ್ಟಿಕ್ ಸಂಗ್ರಹಣೆ ವಿರುದ್ಧ ಕ್ರಮ 2 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗ (BSWML) ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 126ರ ಮಾರುತಿ ಮಂದಿರ ಪ್ರದೇಶದಲ್ಲಿ ಅಕ್ರಮವಾಗಿ ಏಕ ಬಳಕೆ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಶೀಲನೆಯ ವೇಳೆ ಬಾಲಾಜಿ ಪಾಲಿ ಪ್ಯಾಕ್ (ಪ್ಲಾಸ್ಟಿಕ್ ವ್ಯಾಪಾರಿ) ಅವರು ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಹಾಗೂ NWPP ಬ್ಯಾಗ್ ಗಳ ಅಕ್ರಮ ಸಂಗ್ರಹಣೆ ಮತ್ತು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆ ₹2,00,000 (ಎರಡು ಲಕ್ಷ ರೂ.) ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್ ವ್ಯಾಪಾರವನ್ನು ನಾಗರಭಾವಿ ಮುಖ್ಯ ರಸ್ತೆಯಲ್ಲಿ ನಡೆಸಲಾಗುತ್ತಿದ್ದು, ಮೂಡಲಪಾಳ್ಯ, ಅನುಭವನಗರದ 2ನೇ ಕ್ರಾಸ್ ನಲ್ಲಿರುವ ವಾಸಸ್ಥಳ ಕಟ್ಟಡದಲ್ಲಿ ಗೋದಾಮು ಇಟ್ಟುಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಪರಿಶೀಲನೆ ವೇಳೆ ಸುಮಾರು 100 ಕೆ.ಜಿ. ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ಲಾಸ್ಟಿಕ್ ವಸ್ತುಗಳನ್ನು ವಾರ್ಡ್ 126 ಕಚೇರಿಯಲ್ಲಿ ಠೇವಣಿ ಮಾಡಲಾಗಿದ್ದು, ಈ ಕುರಿತು AGM ಅವರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮಕ್ಕಾಗಿ ಈ ಪ್ಲಾಸ್ಟಿಕ್ ವಸ್ತುಗಳನ್ನು KCDC ಗೆ ಕಳುಹಿಸಲಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ಸಂಬಂಧಪಟ್ಟ ವ್ಯಾಪಾರಿಗೆ ಮುಂದಿನ ದಿನಗಳಲ್ಲಿ ಇಂತಹ ನಿಯಮ ಉಲ್ಲಂಘನೆ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಫೋನ್-ಇನ್ ಕಾರ್ಯಕ್ರಮ
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತಿ ಶುಕ್ರವಾರ ಸಾರ್ವಜನಿಕರೊಂದಿಗೆ ಫೋನ್-ಇನ್ ಕಾರ್ಯಕ್ರಮ ಆರಂಭಿಸಿದ್ದಾರೆ. ಈ ವಾರದ ಫೋನ್-ಇನ್ ಕಾರ್ಯಕ್ರಮವು 2026ರ ಏಪ್ರಿಲ್, 17 ರಂದು (ಶುಕ್ರವಾರ) ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಸಾರ್ವಜನಿಕರು ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆ ಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು/ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಬಹುದಾಗಿದೆ.
ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅಹವಾಲುಗಳನ್ನು 'ಸಹಾಯ 2.0' ಪೋರ್ಟಲ್ ನಲ್ಲಿ ದಾಖಲಿಸಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ದೂರು ದಾಖಲಾಗಿರುವ ವಿವರಗಳು ಹಾಗೂ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ನಾಗರಿಕರಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications