ಸ್ವಚ್ಛಗೊಳ್ಳುತ್ತಿರುವ ಬೆಳ್ಳಂದೂರು ಕೆರೆಗೆ ಸಿಸಿಟಿವಿ ಕಣ್ಗಾವಲು
ಎನ್ ಜಿಟಿಯ ಕಠಿಣ ಆದೇಶದಿಂದಾಗಿ ಬೆಳ್ಳಂದೂರು ಕೆರೆಗೆ ಸ್ವಚ್ಛತಾ ಭಾಗ್ಯ ಲಭಿಸಿದೆ. ಇನ್ನೇನಿದ್ದರೂ ಒಂದು ತಿಂಗಳೊಳಗೆ ಎನ್ ಜಿಟಿ ಹಾಕಿದ ಡೆಡ್ ಲೈನ್ ಗುರಿಯನ್ನು ತಲುಪುವಲ್ಲಿ ಬಿಡಿಎ ಯಶಸ್ವಿಯಾಗುತ್ತದಾ ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು, ಏಪ್ರಿಲ್ 26: ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ ಜಿಟಿ) ನೀಡಿದ ಆದೇಶಕ್ಕನುಗುಣವಾಗಿ ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ.
ಕಳೆದ ಕೆಲ ದಿನಗಳಿಂದ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿತ್ತು. ದುರ್ನಾಥ ಬೀರುತ್ತಿದ್ದ ಈ ನೊರೆ ಗಾಳಿಯಲ್ಲಿ ಹಾರಿ ದಾರಿಹೋಕರ ಮೇಲೆಲ್ಲ ಬಿದ್ದು ಪರದಾಡುವಂತೆ ಮಾಡಿತ್ತು.[ಬೆಳ್ಳಂದೂರು ಕೆರೆ ಸುತ್ತಲಿನ ಕೈಗಾರಿಕೆ ಮುಚ್ಚಿ: ಎನ್ ಜಿಟಿ]
ಬೆಳ್ಳದೂರು ಕೆರೆಯ ಸುತ್ತ ಇದೀಗ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಲಾಗಿದ್ದು, ಕೆರೆಗೆ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕೆರೆಗೆ ಯಾರೇ ಕಸ ಎಸೆದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಸದ್ಯಕ್ಕೆ ಬೆಳ್ಳದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಒಂದು ತಿಂಗಳೊಳಗೆ ಈ ಕೆಲಸವನ್ನು ಮುಗಿಸುವಂತೆ ಬಿಡಿಎ ತನ್ನ ಅಧಿಕಾರಿಗಳಿಗೆ ಆದೇಶ ನೀಡಿದೆ. ಈಗ ಕೆರೆ ಭಾಗದಲ್ಲಿರುವ ಕಳೆಯನ್ನು ತೆಗೆಯಲಾಗುತ್ತಿದ್ದು, ಅಗತ್ಯವಿರುವೆಡೆಯಲ್ಲಿ ಬೇಲಿಯನ್ನೂ ಹಾಕಲಾಗುತ್ತಿದೆ.[ಮುಖಕ್ಕೆ ರಾಚುತ್ತಿದೆ ಬೆಳ್ಳಂದೂರು ಕೆರೆಯ ದುರ್ಗಂಧಯುಕ್ತ ನೊರೆ]

ಕಳೆ ತೆಗೆದ ನಂತರ ಕೆರೆಯ ಹೂಳೆತ್ತುವ ಕೆಲಸ ನಡೆಯಲಿದ್ದು, ಇದಕ್ಕೇ ಒಂದು ತಿಂಗಳ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಏನೇ ಆಗಲಿ, ಎನ್ ಜಿಟಿಯ ಕಠಿಣ ಆದೇಶದಿಂದಾಗಿ ಬೆಳ್ಳಂದೂರು ಕೆರೆಗೆ ಸ್ವಚ್ಛತಾ ಭಾಗ್ಯ ಲಭಿಸಿದೆ. ಇನ್ನೇನಿದ್ದರೂ ಒಂದು ತಿಂಗಳೊಳಗೆ ಎನ್ ಜಿಟಿ ಹಾಕಿದ ಡೆಡ್ ಲೈನ್ ಗುರಿಯನ್ನು ತಲುಪುವಲ್ಲಿ ಬಿಡಿಎ ಯಶಸ್ವಿಯಾಗುತ್ತದಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications