ಉಕ್ಕಿನ ಸೇತುವೆ ಬದಲು ಎಲಿವೇಟೆಡ್ ರಸ್ತೆ, ಅಳಿಯ ಅಲ್ಲ...!
ಬೆಂಗಳೂರು, ಫೆಬ್ರವರಿ 28 : ಸ್ಟೀಲ್ ಫ್ಲೈಓವರ್ ಯೋಜನೆ ರದ್ದಾಗಿರುವುದು, #SteelFlyoverBeda ಅಭಿಯಾನ ಪ್ರಾರಂಭಿಸಿದ ಬೆಂಗಳೂರಿನ ಜನತೆಯ ಹೋರಾಟಕ್ಕೆ ಸಂದ ಜಯವಾದರೂ, ಈಗಲೇ ಪಟಾಕಿ ಹಾರಿಸಿ, ಸಿಹಿ ಹಂಚಿ ಸಂತಸ ಪಡುವ ಅಗತ್ಯವಿಲ್ಲ.
ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ 6.7 ಕಿ.ಮೀ. ಉದ್ದರ ಉಕ್ಕಿನ ಸೇತುವೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕುಟುಂಬಕ್ಕೆ 65 ಕೋಟಿ ರುಪಾಯಿ ಕಪ್ಪಕಾಣಿಕೆ ನೀಡಲಾಗಿದೆ ಎಂದು ಬಿಜೆಪಿ ಆರಂಭಿಸಿದ್ದ ಆರೋಪಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಸರಕಾರ ಮತ್ತೊಂದು ಯೋಜನೆಗೆ ಕೈಹಾಕಿದೆ. [ಭ್ರಷ್ಟತನದ ತುಕ್ಕು ಹಿಡಿದಿದ್ದ ಉಕ್ಕಿನ ಸೇತುವೆ ಯೋಜನೆ ರದ್ದು]

ಅದು ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಬಸವೇಶ್ವರ ವೃತ್ತದವರೆಗೆ ಸ್ಟೀಲ್ ಫ್ಲೈಓವರ್ ಬದಲು ಎಲಿವೇಟೆಡ್ ರಸ್ತೆಯನ್ನು ನಿರ್ಮಿಸುವ ಪ್ಲಾನ್ ಸಿದ್ದರಾಮಯ್ಯ ಹಾಕಿಕೊಂಡಿದೆ. ಅಳಿಯ ಅಲ್ಲ ಮಗಳ ಗಂಡ! ಉಕ್ಕಿನ ಸೇತುವೆ ಯೋಜನೆ ರದ್ದಾಗಿದ್ದರಿಂದ ಕಿಕ್ ಬ್ಯಾಕ್ ಕಥೆಯೇನು ಎಂಬಿತ್ಯಾದಿ ಪ್ರಶ್ನೆಗಳು ಟ್ವಿಟ್ಟರಿನಲ್ಲಿ ಹರಿದಾಡುತ್ತಿವೆ.
ಇದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾಡಿದ ಹೋರಾಟದ ಫಲ. ಸಂಪೂರ್ಣ ಯಶಸ್ಸು ಅವರಿಗೇ ಸಿಗಬೇಕು ಎಂದು ಕೆಲ ಬಿಜೆಪಿ ಶಾಸಕರು, ಸಂಸದರು ಕ್ರೆಡಿಟ್ ತೆಗೆದುಕೊಳ್ಳಲು ನೋಡುತ್ತಿದ್ದಾರೆ. ಆದರೆ, ಅವರಿಗೆ ನೆನಪಿರಲಿ, ಬೆಂಗಳೂರು ಜನತೆಯ ಹೋರಾಟವೂ ಇದರ ಹಿಂದಿದೆ. [ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಸ್ಟೀಲ್ ಫ್ಲೈಓವರ್ ಬೇಡ ಎಂದ ಮಾನವ ಸರಪಳಿ ನಿರ್ಮಿಸಲಾಗಿತ್ತು, ಸಹಿ ಅಭಿಯಾನ ಪ್ರಾರಂಭಿಸಲಾಗಿತ್ತು. ಇದಕ್ಕೆ ಸಹಸ್ರಾರು ಬೆಂಗಳೂರಿನ ನಾಗರಿಕರು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಸಂಸದ ರಾಜೀವ್ ಚಂದ್ರಶೇಖರ್ ಅವರು ಕೂಡ ಈ ಯೋಜನೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸ್ಟೀಲ್ ಫ್ಲೈಓವರ್ ರದ್ದಾಗಿರುವುರಿಂದ, ಆ ದಾರಿಯುತ್ತದ್ದಕ್ಕೂ ಸಾವಿನ ಕ್ಷಣಗಣನೆ ಮಾಡಿಕೊಂಡು ಉಸಿರು ಬಿಗಿಹಿಡಿದು, ತೂಗಾಡುವುದನ್ನೇ ನಿಲ್ಲಿಸಿದ್ದ ವೈವಿಧ್ಯಮಯ ಮರಗಳು ಮತ್ತೆ ಉಸಿರಾಡಲು ಆರಂಭಿಸಿದ್ದವು. ಆದರೆ, ಎಲಿವೇಟೆಡ್ ರಸ್ತೆ ಬರುತ್ತಿರುವುದರಿಂದ ಮತ್ತೆ ಅವುಗಳ ನಾಶಕ್ಕೆ ದಿನಗಣನೆ ಆರಂಭವಾದರೂ ಅಚ್ಚರಿಯಿಲ್ಲ.












Click it and Unblock the Notifications