ಬಸವೇಶ್ವರನಗರದ ಕಳ್ಳಿ ಕಂ ವೈದ್ಯೆ ಕಲ್ಪನಾ ಅರೆಸ್ಟ್

ಬಸವೇಶ್ವರನಗರದ ಡಾ. ಕಲ್ಪನಾ (51) ಬಂಧಿತ ವೈದ್ಯೆ. ಈಯಮ್ಮ, ಪ್ರತಿಷ್ಠಿತ ಮನೆತನದವಳಂತೆ ಕಂಗೊಳಿಸುತ್ತಾ ಬಂಗಾರದ ಆಭರಣಗಳ ಪ್ರದರ್ಶನ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಳು. ಆದರೆ ಅಲ್ಲಿ ಆಭರಣ ಖರೀದಿ ನೆಪದಲ್ಲಿ ಸಿಬ್ಬಂದಿಯನ್ನು ಯಾಮಾರಿಸಿ ಆಭರಣಗಳನ್ನು ದೋಚುತ್ತಿದ್ದಳು. ಕೊನೆಗೂ ಉತ್ತರ ವಿಭಾಗದ ಪೊಲೀಸರು ಈಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 32 ಲಕ್ಷ ರೂ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಈಯಮ್ಮ ಕಲ್ಪನಾ ನಗರದಲ್ಲಿ ಎಲ್ಲಿಯಾದರೂ ಸರಿ ಚಿನ್ನದ ವಸ್ತುಗಳ ಪ್ರದರ್ಶನ ನಡೆಯುತ್ತಿದ್ದಲ್ಲಿ ಅಂತಹ ಮಳಿಗೆಗಳಿಗೆ ಭೇಟಿ ಕೊಟ್ಟು, ಕೈಚಳಕ ತೋರಿ ಆಭರಣಗಳನ್ನು ದೋಚುತ್ತಿದ್ದಳು. ಇತ್ತೀಚೆಗೆ ಕೋರಮಂಗಲ, ಪ್ಯಾಲೆಸ್ ಗ್ರೌಂಡ್ಸ್, ಜಯಮಹಲ್ ಪ್ಯಾಲೆಸ್ ಹೋಟೆಲ್ ಮತ್ತು ಶೆರ್ಟಾನ್ ಹೋಟೆಲ್ ನಂತಹ ಐಷಾರಾಮಿ ಸ್ಥಳಗಳಲ್ಲಿ ಆಯೋಜಿಸುತ್ತಿದ್ದ ಚಿನ್ನದ ವಸ್ತು ಪ್ರದರ್ಶನಗಳಲ್ಲಿ ಕೈ ಚಳಕ ತೋರಿದ್ದಳು.
ಒಂದು ತಿಂಗಳ ಹಿಂದೆ ಏನಾಯಿತೆಂದರೆ ಜಯಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಸುಮಾರು 75 ಗ್ರಾಂ ತೂಕದ ಆಭರಣಗಳು ಕಳುವಾಗಿರುವ ಬಗ್ಗೆ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಮಾಹಿತಿ ಕಲೆಹಾಕುತ್ತಿದ್ದಾಗ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶೆರ್ಟನ್ ಹೋಟೆಲಿನಲ್ಲಿ ಆಭರಣ ಪ್ರದರ್ಶನ ಮತ್ತು ಮೇಳ ನಡೆಯುತ್ತಿರುವುದನ್ನು ಗಮನಿಸಿ, ಆರೋಪಿ 'ಇಲ್ಲಿಗೂ ವಿಸಿಟ್ ಹಾಕಬಹುದು' ಎಂದು ಶಂಕಿಸಿ ಕಾರ್ಯಪ್ರವೃತ್ತರಾದರು.
ಅಪರಾಧ ವಿಭಾಗದ ತಂಡವೊಂದು ರಸಹ್ಯವಾಗಿ ಕಾರ್ಯಾಚರಣೆ ನಡೆಸಿತು. ಅಲ್ಲಿಗೆ ಬಂದ ಹಳೇ ಕಳ್ಳಿಯನ್ನು ಗಮನಿಸಿದ ಸಿಬ್ಬಂದಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈಕೆಯೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ವೈದ್ಯೆ ಡಾ ಕಲ್ಪನಾ ವಿರುದ್ಧ ಪ್ರಕರಣ ದಾಖಲಾಗಿದ್ದು, 2004ರಲ್ಲಿ ಇ-ಜೋನ್ ಎಲೆಕ್ಟ್ರಾನಿಕ್ ಮಳಿಗೆಯಿಂದ ಲ್ಯಾಪ್ ಟಾಪ್ ಕಳವು ಮಾಡಿದ್ದ ಆರೋಪ ಎದುರಿಸಿದ್ದಳು.
ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಎಸಿಪಿ ಸಾರಾ ಫಾತೀಮ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯಾಚರಣೆ ತಂಡದಲ್ಲಿದ್ದರು.












Click it and Unblock the Notifications