ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಆಸ್ಪತ್ರೆಗೆ ದಾಖಲು
Recommended Video
ಬೆಂಗಳೂರು, ನವೆಂಬರ್ 12 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಡಿ. ಕೆ. ಶಿವಕುಮಾರ್ ಬೆಂಗಳೂರಿನಲ್ಲಿದ್ದಾರೆ.
ಸೋಮವಾರ ತಡರಾತ್ರಿ ಡಿ. ಕೆ. ಶಿವಕುಮಾರ್ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಕ್ತದೊತ್ತಡ ಸಹ ಕಾಣಿಸಿಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ನವೆಂಬರ್ 1ರ ಶುಕ್ರವಾರ ಬೆನ್ನು ನೋವು, ರಕ್ತದೊತ್ತಡದ ಕಾರಣ ಡಿ. ಕೆ. ಶಿವಕುಮಾರ್ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಡಿ. ಕೆ. ಶಿವಕುಮಾರ್ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ವಿವಿಧ ದೇವಾಲಯಗಳಿಗೆ ನವೆಂಬರ್ 7 ಮತ್ತು 8ರಂದು ಭೇಟಿ ನೀಡಿದ್ದರು.
ನವೆಂಬರ್ 10ರಂದು ಉಪ ಚುನಾವಣೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಅವರು ಪಾಲ್ಗೊಂಡಿದ್ದರು. ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ನವದೆಹಲಿಯ ತಿಹಾರ್ ಜೈಲಿನಲ್ಲಿ ಸುಮಾರು 48 ದಿನಗಳ ಕಾಲ ಇದ್ದ ಡಿ. ಕೆ. ಶಿವಕುಮಾರ್ ದೆಹಲಿ ಆಸ್ಪತ್ರೆಯಲ್ಲಿಯೂ ಅನಾರೋಗ್ಯದ ಕಾರಣದಿಂದಾಗಿ ಚಿಕಿತ್ಸೆ ಪಡೆದಿದ್ದರು.
ಡಿ. ಕೆ. ಶಿವಕುಮಾರ್‌ಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ, ಅಧಿಕ ಓಡಾಟದ ಕಾರಣ ಅವರು ಬಳಲಿದ್ದಾರೆ.












Click it and Unblock the Notifications