ಬೆಂಗಳೂರಿನ 6 ಪಥದ ಈ ರಸ್ತೆಯಿಂದ ಸಂಚಾರ ಸಮಸ್ಯೆಗೆ ಮುಕ್ತಿ
ಬೆಂಗಳೂರು, ಮೇ 25; ಲಾರಿಗಳ ಸಂಚಾರದ ಕಾರಣ ಉಂಟಾಗುತ್ತಿದ್ದ ಸಂಚಾರ ದಟ್ಟಣೆಗೆ ಪರಿಹಾರ ಸಿಕ್ಕಿದೆ. ದೇವನಹಳ್ಳಿ-ಹೊಸಕೋಟೆ ನಡುವಿನ 6 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಶೀಘ್ರವೇ ಮುಕ್ತವಾಗುವ ನಿರೀಕ್ಷೆ ಇದೆ.
ರಾಷ್ಟ್ರೀಯ ಹೆದ್ದಾರಿ 648 ದೇವನಹಳ್ಳಿಯ ಜಿಲ್ಲಾಡಳಿತ ಭವನದಿಂದ ಪಟ್ಟಣದ ಹೊರವಲಯದ ಮೂಲಕ ಸಾಗಿ ಹೊಸಕೋಟೆ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾದ ಬಳಿಕ ಲಾರಿಗಳು ಪಟ್ಟಣದ ಒಳಗೆ ಬರುವುದು ತಪ್ಪಲಿದ್ದು, ವಾಹನ ಸವಾರರ ಕಿರಿಕಿರಿಗೆ ಮುಕ್ತಿ ಸಿಗಲಿದೆ.

37.6 ಕಿ. ಮೀ. ಉದ್ದದ 6 ಪಥದ ರಸ್ತೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಉದ್ಘಾಟನೆಗೆ ರಸ್ತೆ ಸಿದ್ಧವಾಗಿದ್ದು, ಜನರು ಸಂಚಾರ ದಟ್ಟಣೆ ತಪ್ಪುವ ನಿರೀಕ್ಷೆಯಲ್ಲಿದ್ದಾರೆ.
1,278 ಕೋಟಿ ವೆಚ್ಚ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಜಿಲ್ಲಾಡಳಿತ ಭವನದಿಂದ ಹೊಸಕೋಟೆ ತನಕ 37.6 ಕಿ. ಮೀ. ರಸ್ತೆಯನ್ನು 1,278 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಭಾಗದಿಂದ ಪಟ್ಟಣದ ಮೂಲಕ ಸಾಗಿ ಕೈಗಾರಿಕಾ ಪ್ರದೇಶವನ್ನು ಸಂಪರ್ಕಿಸಿ ಪಕ್ಕದ ರಾಜ್ಯಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ.

ಈ ಮಾರ್ಗ ಸಂಚಾರಕ್ಕೆ ಮುಕ್ತವಾದ ಬಳಿಕ ಬೆಂಗಳೂರು ನಗರದ ಒಳಭಾಗದಿಂದ ಅಕ್ಕಪಕ್ಕದ ರಾಜ್ಯಗಳಿಗೆ ಸಾಗುವ ವಾಹನಗಳು ನೆಲಮಂಗಲ, ದಾಬಸ್‌ಪೇಟೆ, ದೊಡ್ಡಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ತಲುಪಿ, ಹೊಸಕೋಟೆ ಮೂಲಕ ಹೈದರಾಬಾದ್, ತಮಿಳುನಾಡು ಕಡೆ ಸಾಗಬಹುದಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಈ 6 ಪಥದ ಹೆದ್ದಾರಿ ಅತಿ ಉಪಯುಕ್ತವಾಗಿದೆ.
ರಸ್ತೆಯನ್ನು ಉತ್ತಮ ದರ್ಜೆಯಲ್ಲಿ ನಿರ್ಮಾಣ ಮಾಡಲಾಗಿದೆ. ದೇವನಹಳ್ಳಿ-ಹೊಸಕೋಟೆ ನಡುವಿನ ದೂರವನ್ನು ಸುಮಾರು 20 ನಿಮಿಷದಲ್ಲಿ ಕ್ರಮಿಸಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಆದರೆ ಅಧಿಕೃತವಾಗಿ ರಸ್ತೆ ಲೋಕಾರ್ಪಣೆಯಾಗಬೇಕಿದೆ.
ದೇವನಹಳ್ಳಿ-ಹೊಸಕೋಟೆ ನಡುವೆ ಈ ಹಿಂದೆ 2 ಪಥದ ರಸ್ತೆ ಇತ್ತು. ಬೆಳಗ್ಗೆ ಮತ್ತು ಸಂಜೆಯ ವೇಳೆ ಸರಕು ಸಾಗಣೆ ಮಾಡುವ ಲಾರಿಗಳಿಂದ ಉಳಿದ ವಾಹನಗಳ ಸವಾರರು ಪರದಾಡುತ್ತಿದ್ದರು. ಹೊಸಕೋಟೆ ತಲುಪಲು ಸುಮಾರು ಒಂದೂವರೆ ಗಂಟೆ ಸಮಯ ಬೇಕಿತ್ತು. ಆದರೆ ಹೊಸ 6 ಪಥದ ರಸ್ತೆಯಿಂದಾಗಿ ಕೇವಲ 20 ನಿಮಿಷದಲ್ಲಿ ಸಾಗಬಹುದಾಗಿದೆ.
ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಯೋಜನೆ 'ಭಾರತ್ ಮಾಲಾ'. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಉತ್ತರ ದಕ್ಷಿಣ, ಪೂರ್ವ ಪಶ್ಚಿಮ ಸಂಪರ್ಕಿಸುವ ಗುರಿಯೊಂದಿಗೆ ಈ ಯೋಜನೆಯಡಿ ಉತ್ಕೃಷ್ಟ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುತ್ತಿದೆ.
ದೇವನಹಳ್ಳಿ-ಹೊಸಕೋಟೆ ನಡುವಿನ 6 ಪಥದ ರಸ್ತೆ ಅಗತ್ಯ ಇರುವಲ್ಲಿ ಸರ್ವೀಸ್ ರಸ್ತೆಯನ್ನು ಒಳಗೊಂಡಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಈ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ರಸ್ತೆ ಬದಿಯಲ್ಲಿ ಅಳವಡಿಕೆ ಮಾಡಿರುವ ವಿದ್ಯುತ್ ದೀಪಗಳು ಸೌರಶಕ್ತಿಯ ಸಹಾಯದಿಂದ ಕೆಲಸ ಮಾಡಲಿವೆ.
ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಸ್ತೆ ಸುರಕ್ಷತಾ ಫಲಕ, ಎಲ್‌ಇಡಿ ಫಲಕ ಅಳವಡಿಕೆ ಕಾರ್ಯವನ್ನು ಕೈಗೊಳ್ಳಲಾಗಿದೆ. 'ಭಾರತ್ ಮಾಲಾ' ಯೋಜನೆಯಡಿ ಕರ್ನಾಟಕದಲ್ಲಿ ಕೈಗೊಂಡಿರುವ 19 ಯೋಜನೆಗಳಲ್ಲಿ ಪೂರ್ಣಗೊಂಡ ಎರಡು ಯೋಜನೆಗಳಲ್ಲಿ ಇದು ಸಹ ಒಂದಾಗಿದೆ.












Click it and Unblock the Notifications