BBMP: ನಲಪಾಡ್ ಅಕಾಡೆಮಿ, ಚೈತನ್ಯ ಶಾಲೆ ಕಾಂಪೌಂಡ್ ತೆರವು, ರೀ ಸರ್ವೇಗೆ ಬಾಗ್ಮನೆ ಟೆಕ್‌ಪಾರ್ಕ್ ಪಟ್ಟು
ಬೆಂಗಳೂರು ಸೆಪ್ಟಂಬರ್ 14: ರಾಜಕಾಲುವೆ ಒತ್ತುವರಿದಾರರಿಗೆ ಬಿಬಿಎಂಪಿ ಭಯ ಹುಟ್ಟಿಸಿದೆ. ಬಿಬಿಎಂಪಿಯು ಮೂರನೇ ದಿನವು ಯಲಹಂಕ, ಮಹದೇವಪುರ ಸೇರಿದಂತ ವಿವಿಧೆಡೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿದೆ.
ನಲಪಾಡ್ ಅಕಾಡೆಮಿಯಿಂದ, ಜ್ಯೂಸ್ ಫ್ಯಾಕ್ಟರಿ, ಚೈತನ್ಯ ಶಾಲೆಗಳಿಂದ ಆಗಿರುವ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವುಗೊಳಿಸುತ್ತಿದ್ದಾರೆ. ಇದೇ ವೇಳೆ ಬಾಗ್ಮನೆ ಟೆಕ್‌ಪಾರ್ಕ್‌ನಿಂದಾಗಿದೆ ಎನ್ನಲಾದ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾದಾಗ ಪುನಃ ಸರ್ವೇ ಮಾಡುವಂತೆ ಬಾಗ್ಮನೆ ಟೆಕ್‌ಪಾರ್ಕ್ ಪಟ್ಟು ಹಿಡಿದೆ.
ಮಹಾದೇವಪುರ ವ್ಯಾಪ್ತಿಯ ಮುನೇನಕೊಳಲು ಭಾಗದಲ್ಲಿ ಒಆರ್‌ಆರ್‌ನಿಂದ ಶಾಂತಿನಕೇತನ ಲೇಔಟ್‌ವರೆಗೆ ತೆರವು ಕಾರ್ಯಾಚರಣೆ ನಡೆದಿದೆ. ಮಹದೇವ ವಾಗ್ದೇವಿ ಶಾಲೆಯಿಂದ ಕಟ್ಟಡ, ಕಾಪೌಂಡ್‌ಗಳನ್ನು ನೆಲಸಮಗೊಂಡಿವೆ. ಕೆಲವು ಕಡೆಗಳಲ್ಲಿ ತೆರವು ಕಾರ್ಯಾಚರಣೆ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಲಪಾಡ್ ಅಕಾಡೆಮಿಯ ಬಾಕಿ ಒತ್ತುವರಿ ತೆರವು
ಮಹದೇವಪುರ ವಲಯದ ಚೆಲ್ಲಘಟ್ಟದ ಸರ್ವೇ ನಂಬರ್ 70/14 ರಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್‌ಗೆ ಸೇರಿದ ನಲಪಾಡ್ ಅಕಾಡೆಮಿಯಿಂದ 2.5ಮೀಟರ್ ಅಗಲ ಹಾಗೂ 150.5ಮೀಟರ್ ಉದ್ದ ರಾಜಕಾಲುವೆ ಒತ್ತುವರಿ ಆಗಿತ್ತು. 50ಮೀಟರ್ ತೆರವು ಮಾಡಿದ್ದ ಅಧಿಕಾರಿಗಳು ಬುಧವಾರ ಬಾಕಿ ತೆರವು ಕಾರ್ಯ ಮುಂದುವರಿಸಿದ್ದಾರೆ.
ಒತ್ತುವರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಎತ್ತರವಾದ ಕಾಂಪೌಂಡ್ ಅನ್ನು ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಬಿಬಿಎಂಪಿ ಕೇವಲ ಜನಸಾಮಾನ್ಯರ ಒತ್ತುವರಿ ಮಾತ್ರ ತೆರವು ಮಾಡುತ್ತಿದೆ ಎನ್ನುತ್ತಿದ್ದವರಿಗೆ ಈ ಮೂಲಕ ಬಿಬಿಎಂಪಿ ಉತ್ತರ ನೀಡಿದೆ.

ಚೈತನ್ಯ ಶಾಲೆ ಕಾಂಪೌಂಡ್ ತೆರವು: ಆಕ್ರೋಶ
ಶಾಂತಿನಿಕೇತನ ಬಡಾವಣೆಯಲ್ಲರಿವು ಚೈತನ್ಯ ಶಾಲೆ ಕಾಂಪೌಂಡ್ ಅನ್ನು ಬಿಬಿಎಂಪಿ ನೆಲಸಮ ಮಾಡಿದೆ. ಇದನ್ನು ಕಂಡು ಶಾಲಾ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಮಾಹಿತಿ ನೀಡದೇ ಕಾಂಪೌಂಡ್ ಒಡೆದಿರುವುದು ಸರಿಯಲ್ಲ. ಹತ್ತು ವರ್ಷದ ಹಿಂದೆ ಇಲ್ಲಿ ಶಾಲೆ ನಿರ್ಮಿಸಲಾಗಿದೆ. ಅಂದಿನಿಂದಲೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಶಾಲೆ ನಿರ್ಮಿಸುವಾಗ ಇಲ್ಲಿ ಜಮೀನು ಇತ್ತು ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

ರಿ ಸರ್ವೇಗೆ ಪಟ್ಟು ಹಿಡಿದ ಬಾಗ್ಮನೆ ಟೆಕ್‌ಪಾರ್ಕ್
ರಾಜಕಾಲುವೆ ಒತ್ತುವರಿ ತೆರವಿನಲ್ಲಿ ಪಟ್ಟಿಯಲ್ಲಿ ಬಾಗ್ಮನೆ ಟೆಕ್‌ಪಾರ್ಕ್ ಹೆಸರು ಸಹ ಕೇಳಿ ಬಂದಿತ್ತು. ಅದರಂತೆ ಬಿಬಿಎಂಪಿ ಅಧಿಕಾರಿಗಳು ತಾವು ಗುರುತಿಸಿದ್ದ ಒತ್ತುವರಿ ತೆರವಿಗೆ ಬುಧವಾರ ಮುಂದಾಗಿದ್ದಾರೆ. ಈ ವೇಳೆ ಬಾಗ್ಮನೆ ಟೆಕ್‌ಪಾರ್ಕ್ ಸಿಬ್ಬಂದಿ ತೆರವಿಗೆ ಅವಕಾಶ ಮಾಡಿಕೊಡದೇ ಪುನಃ ಸರ್ವೆ ಮಾಡುವಂತೆ ಪಟ್ಟು ಹಿಡಿದ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಸರ್ವೇ ಮಾಡಿ ಮಾರ್ಕಿಂಗ್ ಬಿಬಿಎಂಪಿ ಅಧಿಕಾರಿಗಳಿಗೆ ಇದು ತಲೆನೋವಾಗಿ ಪರಿಗಣಮಿಸಿದೆ. ಕೆಲ ಹೊತ್ತು ಸಿಬ್ಬಂದಿ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆದಿದೆ. ಆದರೆ ಸಿಬ್ಬಂದಿ ಮಾತ್ರ ರಿಸರ್ವೇ ಪಟ್ಟಿನಿಂದ ಹಿಂದೆ ಸರಿದಿಲ್ಲ. ಆದರೆ ಅಧಿಕಾರಿಗಳ ಬಳಿಯಲ್ಲಿ ರೀ ಸರ್ವೇ ಕುರಿತು ನ್ಯಾಯಾಲಯ ನೀಡಿರುವ ಯಾವ ದಾಖಲೆಗಳು ಇಲ್ಲ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಗುರುತಿಸಿದ್ದ ಬಾಗ್ಮನೆ ಟೆಕ್‌ಪಾರ್ಕ್ ಒತ್ತುವರಿ ತೆರವುಗೊಳಿಸಲಾಗಲಿ, ಇಲ್ಲವೇ ರೀ ಸರ್ವೇ ಮಾಡುವಲ್ಲಿ ಅಧಿಕಾರಿಗಳು ಪರದಾಡುತ್ತಿದ್ದಾರೆ ಎಂದು
ತಿಳಿದು ಬಂದಿದೆ.

ಜ್ಯೂಸ್ ಫ್ಯಾಕ್ಟರಿಯಿಂದ ಭಾರಿ ಪ್ರಮಾಣ ಒತ್ತುವರಿ
ಯಲಹಂಕ ವಲಯದ ಸಿಂಗಾಪುರ ಲೇಔಟ್ ಅಕ್ಕಪಕ್ಕದ ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲಾಗಿದೆ. ಇದೇ ವೇಳೆ ಇಲ್ಲಿನ ಜ್ಯೂಸ್ ಫ್ಯಾಕ್ಟರಿ ಒತ್ತುವರಿ ಕಂಡು ಬಿಬಿಎಂಪಿ ಅಧಿಕಾರಿಗಳೇ ದಂಗಾಗಿದ್ದಾರೆ. ಒಟ್ಟು 2.7 ಎಕರೆ ವಿಸ್ತೀರ್ಣದಲ್ಲಿ ಜ್ಯೂಸ್ ಫ್ಯಾಕ್ಟರಿ ನಿರ್ಮಿಸಲಾಗಿದೆ. ಬಹುತೇಕ ಕಾರ್ಖಾನೆಯು ರಾಜಕಾಲುವೆ ಮೇಲೇಯೆ ಕಟ್ಟಲಾಗಿದೆ. 400 ಕಾರ್ಮಿಕರಿರುವ ಈ ಜ್ಯೂಸ್ ಕಾರ್ಖಾನೆಯನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡುವ ಪ್ರಕ್ರಿಯೆಯಲ್ಲಿದ್ದಾರೆ. ಕಾಂಪೌಂಡ್, ಕಟ್ಟಡ ಸೇರಿದಂತೆ ಒತ್ತುವರಿಯ ಸಂಪೂರ್ಣ ಭಾಗವನ್ನು ತೆರವು ಮಾಡಲಾಗುತ್ತಿದೆ. ಈ ಕಾರ್ಖಾನೆ 2002ರಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.












Click it and Unblock the Notifications