ಈ ಮಳೆಗಾಲದಲ್ಲಿ ಗಾಳಿ ಆಂಜನೇಯ ಸ್ವಾಮಿ ಸೇಫ್
ಬೆಂಗಳೂರು, ಫೆ. 19 : ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆಸುತ್ತಿರುವ ಕಾಮಗಾರಿಯನ್ನು ಒಂದು ತಿಂಗಳವೊಳಗೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಭಾರೀ ಮಳೆ ಬಂದಾಗ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ನೀರು ನುಗ್ಗುತ್ತದೆ. ಕೊಳಚೆ ನೀರು ದೇವಾಲಯದ ಗರ್ಭಗುಡಿ ತನಕ ಹೋಗುತ್ತದೆ. ಅದನ್ನು ತಪ್ಪಿಸಲು ಬಿಬಿಎಂಪಿ ಅಲ್ಲಿನ ರಾಜಾ ಕಾಲುವೆ ವಿಸ್ತರಣೆ ಮಾಡುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ.

ಗುರುವಾರ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಅವರು ಕಾಮಗಾರಿಯನ್ನು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.[ಗಾಳಿ ಆಂಜನೇಯ ದುಃಸ್ಥಿತಿಗೆ ನೈಸ್ ಕಾರಣ]
5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದನ್ನು ಮತ್ತಷ್ಟು ಚುರುಕುಗೊಳಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿ ಅಂತ್ಯಗೊಂಡ ಬಳಿಕ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಬಾರದು ಅಂತಹ ವ್ಯವಸ್ಥೆಯನ್ನು ಮಾಡಬೇಕು ಎಂದು ನಿರ್ದೇಶನ ನೀಡಿದರು.
ದೇವಾಲಯದ ಸುತ್ತ-ಮುತ್ತಲಿನ ತಗ್ಗುಪ್ರದೇಶಗಳಿಗೆ ಭೇಟಿ ನೀಡಿದ ಮೇಯರ್, ಮುಂದಿನ ಮಳೆಗಾಲದ ಸಂದರ್ಭದಲ್ಲಿ ಈ ಪ್ರದೇಶಗಳಿಗೆ ನೀರು ನುಗ್ಗದಂತೆ ಕಾರ್ಯಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications