D.Sudhakar: ಸರ್ಕಾರವೇ ಸಚಿವರನ್ನು ಸಮರ್ಥಿಸಿದರೆ ತನಿಖೆ ಗತಿ ಏನು?: JDS
ಬೆಂಗಳೂರು, ಸೆಪ್ಟಂಬರ್ 13: ದಲಿತ ಕುಟುಂಬದ ಭೂಮಿಗೆ ವಿಚಾರದಲ್ಲಿ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ ರಾಜ್ಯ ಸಚಿವ ಡಿ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಅವರೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಎಂದು ಜೆಡಿಎಸ್ ಪಕ್ಷದ ನಾಯಕರು ಆಗ್ರಹಿಸಿದರು.
ದಲಿತರ ಮೇಲೆ ದೌರ್ಜನ್ಯ ಎಸಗಿರುವ ಸಚಿವರ ಡಿ.ಸುಧಾಕರ್ ವಿರುದ್ಧ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಉತ್ರ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಜೆಡಿಎಸ್ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಚಿವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾದ ಡಿ.ಸುಧಾಕರ್ ದಲಿತ ಕುಟುಂಬ ಹಾಗೂ ದಲಿತ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಜಾತಿ ನಿಂದನೆ ಮಾಡಿದ್ದು ಅಮಾನುಷವಾಗಿದೆ. ಇದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದು ಎಚ್.ಎಂ.ರಮೇಶ್ ಗೌಡ ಕಿಡಿ ಕಾರಿದರು.
ಸಚಿವ ಡಿ.ಸುಧಾಕರ್ ವರ್ತನೆ ಮತ್ತು ಭಾಷೆ ಸರಿಯಾಗಿಲ್ಲ. ಮಚ್ಚು ಕೊಡಲಿ ಹಿಡಿದು ಓಡಾಡುತ್ತಿದ್ದೆವು ಎಂದು ಹೇಳಿದರೆ ಅರ್ಥವೇನು? ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ಸಚಿವರದ್ದು ತಪ್ಪಿಲ್ಲ ಎನ್ನುತ್ತಾರೆ. ಸಚಿವರ ಮೇಲೆ ಎಫ್ಐಆರ್ ದಾಖಲೆ ನಂತರ ರಾಜೀನಾಮೆ ನೀಡಬೇಕು. ಸಚಿವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರವೇ ಸಚಿವರ ಪರ ನಿಂತರೆ ತನಿಖೆಯ ಗತಿ ಏನು?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವರ ವಿರುದ್ಧ ಎಫ್ ಐಆರ್ ದಾಖಲಾದ ತಕ್ಷಣ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ದಲಿತ, ಅಲ್ಪಸಂಖ್ಯಾತ, ಹಿಂದುಳಿತ ಉದ್ಧಾರಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಇವರು ಹೇಳುತ್ತಿದ್ದಾರೆ. ಪರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಪಿಟಿಸಿಎಲ್) ಕಾಯ್ದೆ ಜಾರಿಗೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಸಚಿವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವೇ ಸಚಿವರ ಪರ ನಿಂತರೆ ತನಿಖೆಯ ಗತಿ ಏನು? ಎಂದು ರಮೇಶ್ ಗೌಡ ಪ್ರಶ್ನೆ ಮಾಡಿದರು.

ಪ್ರಕರಣ ಸಂಬಂಧ ತನಿಖೆಗು ಮೊದಲೇ ಸರ್ಕಾರ ಸಚಿವರ ಬಗ್ಗೆ ಸಮರ್ಥನೆಗೆ ಇಳಿಯುವುದು ತಪ್ಪು. ಅದು ದಲಿತ ಕುಟುಂಬಕ್ಕೆ ಮಾಡುವ ಅನ್ಯಾಯ. ವಾಸ್ತವ ಸ್ಥಿತಿ ಹೀಗಿದ್ದಾಗ ದಲಿತರ ಮೇಲೆ ದೌರ್ಜನ್ಯ ನಡೆಸಿದ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಲು ಸಾಧ್ಯವಾ? ಎಂದು ಕೇಳಿದರು.
ಗೃಹ ಸಚಿವರು ರಾಜೀನಾಮೆ ನೀಡಲು ಆಗ್ರಹ
ಒಂದು ವೇಳೆ ಸಚಿವರು ರಾಜೀನಾಮೆ ನೀಡದಿದ್ದರೆ ಜೆಡಿಎಸ್‌ನಿಂದ ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅವರು ರಾಜೀನಾಮೆ ನೀಡುವ ತನಕ ಹೋರಾಟ ಮಾಡುತ್ತೇವೆ. ದಲಿತರಿಗೆ ನ್ಯಾಯ ಕೊಡಿಸಲು ಗೃಹ ಸಚಿವರು ವಿಫಲ ಆಗಿದ್ದಾರೆ. ಅಲ್ಲದೆ, ದಲಿತರ ರಕ್ಷಣೆ ಮಾಡಲಾಗದ ಅದೇ ಸಮುದಾಯದ ಗೃಹ ಸಚಿವ ಪರಮೇಶ್ವರ್ ಅವರೂ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.
ಸಚಿವ ಡಿ.ಸುಧಾಕರ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ತದ ನಂತರ ಬಿಡುಗಡೆ ಮಾಡಿದರು. ಜೆಡಿಎಸ್ ನಗರ ಮುಖಂಡರಾದ ನಾರಾಯಣ ಸ್ವಾಮಿ, ಪ್ರವೀಣ ಕುಮಾರ್, ಹರೀಶ್, ರೇವಣ್ಣ, ಚಂದ್ರಶೇಖರ್ ಸೇರಿದಂತೆ ಹಲವಾರು ಹಿರಿಯ ನಾಯಕರು ಪ್ರತಿಭಟನೆಯಲ್ಲಿದ್ದರು.












Click it and Unblock the Notifications