Namma Metro: ಕ್ರೇನ್ ಕೈಕೊಟ್ಟು ಅರ್ಧದಲ್ಲೇ ನೇತಾಡುತ್ತಿರುವ ಅತಿ ಭಾರದ ಮೆಟ್ರೋ ಬ್ಲಾಕ್, ಎಲ್ಲಿ?
ಬೆಂಗಳೂರಿನ ಹಲವೆಡೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಲೇ ಇದೆ. ಇಂದು ಮೆಟ್ರೋ ಕಾಮಗಾರಿಯಿಂದ ದೊಡ್ಡ ಎಡವಟ್ಟು ನಡೆದು ಹೋಗಿದೆ. ಮೆಟ್ರೋ ಪಿಲ್ಲರ್‌ಗಳನ್ನು ಜೋಡಿಸುವ ಕ್ರೇನ್ ಅರ್ಧದಲ್ಲೇ ನಿಂತು ಹೋಗುವ ಮೂಲಕ ರಸ್ತೆ ಸವಾರರಿಗೆ ಆತಂಕ ಹುಟ್ಟಿಸಿದೆ.
ಹೆಬ್ಬಾಳದಿಂದ ಕೆ.ಆರ್.ಪುರ ಕಡೆಗೆ ಸಾಗುವ ಔಟರ್ ರಿಂಗ್ ರೋಡ್‌ನಲ್ಲಿ ಈ ಘಟನೆ ನಡೆದಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಕಲ್ಯಾಣ ನಗರದ ಸಮೀಪದ ಔಟರ್ ರಿಂಗ್ ರೋಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಅತಿ ಭಾರದ ಮೆಟ್ರೋ ಬ್ಲಾಕ್ ಅನ್ನು ಕ್ರೇನ್ ಹೊತ್ತಿಕೊಂಡು ಕಾಮಗಾರಿ ನಡೆಸುತ್ತಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರೇನ್ ಅರ್ಧಕ್ಕೇ ನಿಂತುಹೋಗಿದೆ. ಇನ್ನು ಮೆಟ್ರೋ ಬ್ಲಾಕ್ ಎತ್ತರದಲ್ಲೇ ತೂಗಾಡುತ್ತಿದೆ.

ಈ ಹಿನ್ನೆಲೆ ಈ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗಿದೆ. ಕ್ರೇನ್ ಯಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಕ್ರೇನ್ ಕೈಕೊಟ್ಟಿರುವುದರಿಂದ ಕೆ.ಆರ್.ಪುರ ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ಸರ್ವೀಸ್ ರಸ್ತೆ ಮಾತ್ರವೇ ಸಂಚಾರಕ್ಕೆ ಲಭ್ಯವಿದೆ.
ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿವರೆಗಿನ ಮಾರ್ಗದಲ್ಲಿ ಕಲ್ಯಾಣನಗರ ಮೇಲ್ಸೇತುವೆ ಬಳಿ ಮೆಟ್ರೊ ಬ್ಲಾಕ್ ಪ್ರಸ್ತುತ ಗಾಳಿಯಲ್ಲೇ ನೇತಾಡುತ್ತಲೇ ಇದ್ದು, ಯಂತ್ರೋಪಕರಣಗಳಲ್ಲಿನ ತಾಂತ್ರಿಕ ದೋಷದ ಪರಿಣಾಮ ಸಮಸ್ಯೆ ಎದುರಾಗಿದೆ. ಇನ್ನು ಈ ಭಾಗದಲ್ಲಿ ನಡೆಯುತ್ತಿರುವ ಮೆಟ್ರೋ ನಿರ್ಮಾಣ ಯೋಜನೆಯ ಭಾಗವಾಗಿ ತಡರಾತ್ರಿ ಈ ಬ್ಲಾಕ್ ಅನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಅಡಚಣೆಯಿಂದಾಗಿ ಬ್ಲಾಕ್ ನೇತಾಡುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ಈ ರಸ್ತೆಯಲ್ಲಿ ಸಾಗುತ್ತಿದ್ದಾರೆ.

ಈ ಹಿಂದೆ ಇದೇ ಮಾರ್ಗದಲ್ಲಿ ಮೆಟ್ರೋ ಪಿಲ್ಲರ್ ದುರಂತ ಸಂಭವಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಸದ್ಯ ಸ್ಥಳದಲ್ಲಿ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್ ಸಮಸ್ಯೆಯಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರಿಗೆ ಪ್ರತಿನಿತ್ಯವೂ ತೊಂದರೆಯಾಗುತ್ತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಸಿಬ್ಬಂದಿಯು ಕ್ರೇನ್ ಮೂಲಕ ಭಾರದ ಬ್ಲಾಕ್ ಅನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ.

ಇದೇ ಕೆ.ಆರ್.ಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಎರಡು ಮೀಸಲು ಲೇನ್‌ಗಳ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿದ್ದು, ಇದನ್ನು ಮುಂದಿನ ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗಡುವು ನೀಡಿದ್ದಾರೆ. ಸದ್ಯ ಈ ಮಾರ್ಗದಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ವಾಹನ ಸಂಚಾರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ.












Click it and Unblock the Notifications