ಬಿಕೆ ಹರಿಪ್ರಸಾದ್ ಹೇಳಿಕೆಗೆ ಎಂಬಿ ಪಾಟೀಲ್ ಎಚ್ಚರಿಕೆ
ಬೆಂಗಳೂರು, ಸೆಪ್ಟಂಬರ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪರೋಕ್ಷವಾಗಿ ವಾಗ್ದಾಳಿ
ನಡೆಸಿರುವ ಸ್ವಪಕ್ಷೀಯ ನಾಯಕ ಬಿ.ಕೆ ಹರಿಪ್ರಸಾದ್ ಅವರ ನಡೆಯನ್ನು ಕಾಂಗ್ರೆಸ್ ಗಮನಿಸುತ್ತಿದೆ. ಅವರು ಪಕ್ಷದೊಳಗೆ ಮಾತನಾಡಬೇಕಿತ್ತು. ಹೀಗೆ ಬೀದಿಗೆ ಹೋಗುವುದರಿಂದ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಬಿ.ಕೆ ಹರಿಪ್ರಸಾದ್ ಅವರು ಪಕ್ಷದ ಹಿರಿಯ ನಾಯಕರು. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗಿ ಕೆಲಸ ಮಾಡಿದಂತಹವರು. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.
ಹರಿಪ್ರಸಾದ್ ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಎಲ್ಲರೂ ಆತ್ಮೀಯರೆ ಆಗಿದ್ದಾರೆ. ಹೀಗಿರುವಾಗ ಅವರು ಎಲ್ಲ ವಿಚಾರಗಳನ್ನೂ ಪಕ್ಷದ ಒಳಗೇ ಮಾತನಾಡಬೇಕಿತ್ತು. ಆದರೆ ಅವರು ಬೀದಿಗೆ ಹೋಗಿದ್ದಾರೆ. ಇದು ಸರಿಯಲ್ಲ. ಇದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ಸಚಿವರು ಪ್ರತಿಪಾದಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಅಂತಃಕಲಹವೂ ಇಲ್ಲ. ಎಲ್ಲವು ಸರಿಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಬಣದ ಆಗ್ರಹವೇನು?
ಬಿಕೆ ಹರಿಪ್ರಸಾದ್ ಅವರ ಹೇಳಿಕೆಗೆ ಸ್ವಪಕ್ಷದಲ್ಲಿಯೇ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡವರಂತೂ ಕಿರಿ ಕಾರುತ್ತಿದ್ದಾರೆ. ಮಂತ್ರಿ ಮಾಡಿಲ್ಲವೆಂದು ಕೊಟ್ಟ ಅವಕಾಶ ಮರೆತು ಹೀಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಮಾಲೂರಿನಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರು ಆಗ್ರಹಿಸಿದರು.
ಬಿಕೆ ಹರಿಪ್ರಸಾದ್ ವಿರುದ್ಧ ಪಕ್ಷ ವಿರೋಧಿ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಬಣದ ಶಾಸಕರು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅವರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ ಎಂದು ಸಿದ್ದು ಬಣದ ಸದಸ್ಯರು ದೂರಿದ್ದಾರೆ.
ಬಿಕೆ ಹರಿಪ್ರಸಾದ್ ಹೇಳಿದ್ದೇನು?
ಪಂಚೆ ಹಾಕಿ, ಖಾಕಿ ಚಡ್ಡಿ ಹಾಕಿಕೊಂಡರೆ ಅವರು ಸಮಾಜವಾದಿ ಆಗುವುದಿಲ್ಲ. ದೇವರಾಜು ಅರಸು ಅವರ ಕಾರಿನಲ್ಲಿ ಕೂತರೆ ಅವರು ದೇವರಾಜು ಅರಸು ಆಗುವುದಿಲ್ಲ. ಅರಸುರವರ ಚಿಂತನೆಗಳು ಇರಬೇಕು. ನಾನು ಸೋತಿರಬಹುದು. ಆದರೆ ಸತ್ತಿಲ್ಲ. ಸೈಟು ಕಳ್ಳನನ್ನ ಬಗ್ಗೆ ಮಾತನಾಡುತ್ತಾನೆ. ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನು. ನನ್ನನ್ನು ಮಂತ್ರಿ ಮಾಡದಿರುವುದಕ್ಕೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುವ ಮೂಲಕ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಅವರ ಹೇಳಿಕೆಗಳು ವ್ಯಾಪಕ ಚರ್ಚೆ ಹುಟ್ಟುಹಾಕಿವೆ.












Click it and Unblock the Notifications