ಬೆಂಗಳೂರಿನ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ, ಪೊಲೀಸರು ಹೇಳಿದ್ದೇನು?
ಬೆಂಗಳೂರು, ಮೇ. 13 : ಬೆಂಗಳೂರಿನ ಜನಪ್ರಿಯ ಆಸ್ಪತ್ರೆ ಸೇಂಟ್ ಫಿಲೋಮಿನಾಗೆ ಭಾನುವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಬಾಂಬ್ ಸ್ಕ್ವಾಡ್‌ನೊಂದಿಗೆ ಆಸ್ಪತ್ರೆಯ ಎಲ್ಲಾ ಶಾಖೆಗಳಿಗೆ ದೌಡಾಯಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನಂತರ ಬೆಂಗಳೂರು ಪೊಲೀಸರು ಈ ಬೆದರಿಕೆ ಸುಳ್ಳು (ಹುಸಿ ಬಾಂಬ್ ಬೆದರಿಕೆ) ಎಂದು ಪತ್ತೆ ಹಚ್ಚಿ ತನಿಖೆ ಆರಂಭಿಸಿದ್ದಾರೆ. ವರದಿಯ ಪ್ರಕಾರ, ಸ್ಫೋಟಕ ವಸ್ತುಗಳನ್ನು ಆಸ್ಪತ್ರೆಯೊಳಗೆ ಇರಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ವಿಶೇಷ ಘಟಕಕ್ಕ ಇ-ಮೇಲ್ ಬಂದಿತ್ತು. ಇ ಮೇಲ್‌ನಲ್ಲಿ ಯಾವ ಅಸ್ಪತ್ರೆಗೆ ಬಾಂಬ್ ಬೆದರಿಕೆ ಎಂದು ನಿರ್ದಿಷ್ವಾಗಿ ಹೇಳಿರಲಿಲ್ಲ. ಹೀಗಾಗಿ ಪೊಲೀಸರು ಆಸ್ಪತ್ರೆಯ ಎಲ್ಲಾ ಶಾಖೆಗಳಿಗೆ ತೆರಳಿದ್ದರು.

ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿದ ಬಳಿಕ, ಈ ಇದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಗಿದೆ. ಇಂತಹ ಕಿಡಿಗೇಡಿ ಕೆಲಸ ಮಾಡಿದ ಹಿಂದಿರುವ ಆರೋಪಿಗಳನ್ನು ಹಿಡಿಯಲು ಬೆಂಗಳೂರು ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಪದೇ ಪದೇ ಬೆದರಿಕೆಗಳು ಬರುತ್ತಿವೆ.
15 ಶಾಲೆಗಳಿಗೆ ಬಾಂಬ್ ಬೆದರಿಕೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿ ಭಯ ಭೀತಿಯಲ್ಲಿ ಇರುವಂತಾಗಿತ್ತು. ಅಂದಿನ ಈ ಇಮೇಲ್‌ಗಳು ಕೂಡ ಹುಸಿ ಕರೆ ಎಂದು ನಗರ ಪೊಲೀಸರು ಶಂಕಿಸಿದ್ದಾರೆ.
" ಹಲವು ಶಾಲೆಗಳ ಶಾಲಾ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ. ನಾವು ಕಮಾಂಡ್ ಸೆಂಟರ್‌ನಿಂದ ಕರೆ ಸ್ವೀಕರಿಸಿದ್ದೆವು. ತಕ್ಷಣ ನಮ್ಮ ಪೊಲೀಸ್ ತಂಡಗಳನ್ನು ನಗರದ ವಿವಿಧ ಭಾಗಗಳಲ್ಲಿನ ಶಾಲೆಗಳಿಗೆ ಕಳುಹಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆಯ ಆವರಣದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಸಂಪೂರ್ಣ ಶೋಧವನ್ನು ನಡೆಸಲಾಗಿದೆ. ಇಲ್ಲಿಯವರೆಗೆ, ಇನ್ನೂ ಅನುಮಾನಾಸ್ಪದವಾದ ಏನೂ ಕಂಡುಬಂದಿಲ್ಲ ಪ್ರಾಥಮಿಕವಾಗಿ, ಇದು ಹುಸಿ ಸಂದೇಶದಂತೆ ತೋರುತ್ತಿದೆ. ಪೋಷಕರು ಗಾಬರಿಪಡುವ ಅಗತ್ಯವಿಲ್ಲ" ಎಂದು ಪೊಲೀಸರು ಹೇಳಿದ್ದರು.












Click it and Unblock the Notifications