Get Updates
Get notified of breaking news, exclusive insights, and must-see stories!

ಬಿಬಿಎಂಪಿ: 280 ಟನ್ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯಾಚರಣೆ ಶೀಘ್ರ ಆರಂಭ

ಬೆಂಗಳೂರು, ಆಗಸ್ಟ್ 25: ಬೆಂಗಳೂರಿನ ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿನೂತನವಾಗಿ ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಸ್ಥಾಪಿಸಲಾಗಿದೆ. ಅದನ್ನು ಶೀಘ್ರ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ನಗರದ ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತ್ಯಾಜ್ಯದಿಂದ ಉತ್ಪತ್ತಿಯಾಗುವ ಲೀಚೆಟ್ ಅನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ನಿಟ್ಟಿನಲ್ಲಿ ವಿನೂತನ ಮಾದರಿಯಲ್ಲಿ ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಅನ್ನು ಪರಿಶುದ್ಧ್ ವೆಂಚರ್ಸ್ ಸಂಸ್ಥೆಯಿಂದ ಸ್ಥಾಪಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ ಲೀಚೆಟ್ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ಲಿಯರೆನ್ಸ್ ನೀಡಿದ ಬಳಿಕ ಟ್ರೀಟ್ಮೆಂಟ್ ಪ್ಲಾಂಟ್ ಅನ್ನು ಉದ್ಘಾಟಿಸಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದೆಂದು ಅವರು ವಿವರಿಸಿದರು.

Chikkanagamangal Waste Treatment Plant Operation Start Soon BBMP Says

ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ನಲ್ಲಿ ಪ್ರತಿನಿತ್ಯ 50 ಸಾವಿರ ಲೀಟರ್ ಲೀಚೆಟ್ ಅನ್ನು ಸಂಸ್ಕರಿಸುವ ಸಾಮರ್ಥ್ಯ ಇದೆ. ಅದರಿಂದ ಸುಮಾರು 30 ಸಾವಿರ ಲೀಟರ್ ಶುದ್ಧ ನೀರು ಉತ್ಪತ್ತಿಯಾಗಲಿದೆ. ಲೀಚೆಟ್ ಪ್ಲಾಂಟ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ನಂತರ ಲೀಚೆಟ್ ಅನ್ನು ಸಂಸ್ಕರಿಸಿ ಅದರಿಂದ ಸಿಗುವ ಶುದ್ಧ ನೀರನ್ನು ರೈತರು ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಉಚಿತವಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ನಿತ್ಯ 280 ಟನ್ ತ್ಯಾಜ್ಯ ಸಂಸ್ಕರಣೆ

ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 300 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಇದೆ. ಸದ್ಯ ಪ್ರತಿನಿತ್ಯ ಸರಾಸರಿ 280 ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಸಂಸ್ಕರಣಾ ಘಟಕದಲ್ಲಿ ದುರಸ್ತಿಯಿರುವ ಯಂತ್ರಗಳನ್ನು ಕೂಡಲೆ ಸರಿಪಡಿಸಬೇಕು. ಜೊತೆಗೆ ಎಲ್ಲಾ ಕಡೆ ಎಲ್ಇಡಿ ದೀಪಗಳನ್ನು ಅಳವಡಿಸಿ ದಿನದ 24 ಗಂಟೆಯೂ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುವಂತೆ ಮಾಡಿ ಪಾಲಿಕೆಯ ಮಾದರಿ ತ್ಯಾಜ್ಯ ಸಂಸ್ಕರಣಾ ಘಟಕವನ್ನಾಗಿ ಮಾಡಬೇಕು ಎಂದರು.

Chikkanagamangal Waste Treatment Plant Operation Start Soon BBMP Says

ಸಂಸ್ಕರಣಾ ಘಟಕದಲ್ಲಿರುವ ಖಾಲಿ ಜಾಗವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಹಾಳಾಗಿರುವ ಯಂತ್ರೋಪಕರಣಗಳು ಹಾಗೂ ಸಂಬಂಧಿಸಿದ ವಾಹನಗಳನ್ನು ಹರಾಜಿಗೆ ಹಾಕಲು ಸೂಚಿಸಿದರು.

ಘಟಕ ಬಗ್ಗೆ ಪ್ರಚಾರ ನೀಡಲು ಸಲಹೆ

ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕವು ಸಂಪೂರ್ಣವಾಗಿ ಕಾರ್ಯರಂಭ ಮಾಡಿದ ಬಳಿಕ ಸಂಸ್ಕರಣಾ ಘಟಕದ ಬಗ್ಗೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಸದರಿ ನಾಮಫಲಕಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಸವಿವರವಾದ ಮಾಹಿತಿಯನ್ನು ಅಳವಡಿಸಲು ಸೂಚನೆ ನೀಡಿದರು.

ಅದಷ್ಟೇ ಅಲ್ಲದೇ ತ್ಯಾಜ್ಯ ಸಂಸ್ಕರಣಾ ಘಟಕದ ಬಗ್ಗೆ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ವಾರದ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರದ ದಿನಗಳಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯ್ಕ್, ವಲಯ ಮುಖ್ಯ ಆಭಿಯಂತರರಾದ ರಾಜೇಶ್, ಸಂಸ್ಕರಣಾ ಘಟಕದ ವ್ಯವಸ್ಥಾಪಕಿ ಅರ್ಪಿತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+