Assembly Session: 30 ವರ್ಷದಲ್ಲೇ ಮೊದಲು ಬಾರಿಗೆ ವಿಪಕ್ಷ ನಾಯಕನಿಲ್ಲದ ಅಧಿವೇಶನ: ವಿಪಕ್ಷ ನಾಯಕ ಹೆಸರು ಇಂದು ಘೋಷಣೆ?
ಬೆಂಗಳೂರು, ಜಲೈ 05: ಸೋಮವಾರ ಆರಂಭವಾದ ಕರ್ನಾಟಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದು ಬುಧವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜಕೀಯ ಇತಿಹಾಸದಲ್ಲೇ ವಿಪಕ್ಷ ನಾಯಕ ಇಲ್ಲದೆಯೇ ನಡೆಯುತ್ತಿರುವ ಅಧಿವೇಶನ ಇದಾಗಿದೆ. ಇಂದು ರಾಜ್ಯ ಬಿಜೆಪಿ ವಿರೋಧ ಪಕ್ಷದ ನಾಯಕ ಯಾರೆಂದು ಘೋಷಣೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಬಿಜೆಪಿ ವಿಪಕ್ಷ ಸ್ಥಾನ ಅಲಂಕರಿಸಿದೆ. ಆದರೆ ನಡೆಯುತ್ತಿರುವ 16ನೇ ವಿಧಾನಸಭೆಯ ಮೊದಲ ಅಧಿವೇಶನವು ಬಿಜೆಪಿ ವಿರೋಧ ಪಕ್ಷದ ನಾಯಕರಿಲ್ಲದೇ ಆರಂಭವಾಗಿರುವುದು ವಿಶೇಷವಾಗಿದೆ. ಅಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟರೂ ಸಹಿತ ವಿಪಕ್ಷ ನಾಯಕರ ಹೆಸರು ಮಾತ್ರ ಬಹಿರಂಗವಾಗಿಲ್ಲ. ಇದು ಮೂರು ದಶಕದ (30 ವರ್ಷ) ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದ ಅಧಿವೇಶ ನಡೆಯುತ್ತಿದೆ.

ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ರಾಜ್ಯ ಬಿಜೆಪಿ ಪ್ರತಿಭಟಿಸುತ್ತಿದೆ. ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ಅತ್ತ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕ ಯಾರಾಗಬೇಕೆಂದು ತಿಂಗಳಿನಿಂದಲೂ ಚರ್ಚಿಸುತ್ತಲೆ ಇದ್ದು, ಇಂದು ಅಂತಿಮಗೊಳ್ಳಲಿದೆ ಎನ್ನಲಾಗಿದೆ.
ಇದುವರೆಗೂ ಹೆಸರು ಬಹಿರಂಗೊಂಡಿಲ್ಲ
ಚುನಾವಣೆ ಫಲಿತಾಂಶ ಘೋಷಣೆಯಾಗಿ ಬಿಜೆಪಿ ವಿರೋಧ ಪಕ್ಷ ಸ್ಥಾನ ಖಚಿತವಾಗುತ್ತಿದ್ದಂತೆ ವಿಪಕ್ಷ ಸ್ಥಾನವನ್ನು ಯಾರು ಅಲಂಕರಿಸುತ್ತಾರೆ ಎಂಬ ಗೊಂದಲ ಶುರುವಾಯಿತು. ಆರಂಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕೇಳಿ ಬಂದಿತು.
ಅವರೊಂದಿಗೆ ವಿ.ಸುನೀಲ್ ಕುಮಾರ್, ಆರ್.ಅಶೋಕ್, ಆರಗ ಜ್ಞಾನೇಂದ್ರ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರ ರೇಸಿನಲ್ಲಿದ್ದಾರೆ ಎನ್ನಲಾಯಿತು. ಈ ಮಧ್ಯೆ ಬಿಜೆಪಿ ವಿಧಾನಸಭೆ ಅಧಿವೇಶನ ಮೊದಲೇ ವಿರೋಧ ಪಕ್ಷದ ನಾಯಕರ ನೇಮಕ ನಡೆಯಲಿದೆ ಎಂದು ಹೇಳಿ ಮಾತು ತಪ್ಪಿತು.

ಇನ್ನೂ ಮೊನ್ನೆಯಷ್ಟೇ ಇದೇ ವಿಚಾರವಾಗಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದರು. ಆದರೆ ಇನ್ನೂವರೆಗೆ ಹೆಸರು ಘೋಷಣೆ ಆಗಿಲ್ಲ. ಚರ್ಚೆಗಳು ನಡೆಯುತ್ತಲೇ ಇದ್ದು, ಇಂದು ವಿಪಕ್ಷ ಸ್ಥಾನಕ್ಕೆ ಹೆಸರು ಘೋಷನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಬಿಜೆಪಿಯಲ್ಲಿ ಗರಿಗೆದರಿದ ಚಟುವಟಿಕೆ
ವಿರೋಧ ಪಕ್ಷದ ನಾಯಕರಷ್ಟೇ ಅಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಹೆಸರು ಅಂತಿಮಗೊಳ್ಳಬೇಕಿದೆ. ಇವೆರಡು ಒಂದೇ ಭಾರಿಗೆ ಘೋಷಣೆ ಆಗುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಹೈಕಮಾಂಡ್ ಮಾತ್ರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ರಾಜಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಈ ಸಂಬಂಧವೇ ಮಂಗಳವಾರ ಜುಲೈ 04 ರಂದು ಪಕ್ಷದ ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಬಂದಿದ್ದ ವಿನೋದ್ ತಾವಡೆ ಮತ್ತು ಮನ್ಸುಖ್ ಮಾಂಡವಿಯ, ರಾಜ್ಯದ ಹಿರಿಯ ಮುಖಂಡರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಮರಳಿದ್ದಾರೆ. ಸದ್ಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹೈಕಮಾಂಡ್ ಅಂಗಳದಲ್ಲಿದೆ. ಇತ್ತೀಚೆಗೆ ಬಿಎಸ್ ಯಡಿಯೂರಪ್ಪ ಅವರು ಸಹ ದೆಹಲಿ ಭೇಟಿ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಲಿ ಕೇಂದ್ರ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಸೂಚಿಸದ್ದಾರೆ ಎಂದು ತಿಳಿದು ಬಂದಿತ್ತು.
ಕ್ಯಾರೆ ಎನ್ನದ ಹೈಕಮಾಂಡ್: ಕಾಂಗ್ರೆಸ್
ಎರಡು ಪ್ರಮುಖ ಸ್ಥಾನಗಳಿಗೆ ನಾಯಕ ಆಯ್ಕೆ ಕಸರತ್ತಿನಲ್ಲಿರುವ ಬಿಜೆಪಿಯ ಕಾಲೆಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಬೀಡು ಬಿಟ್ಟಿದ್ದ ಕೇಂದ್ರದ ನಾಯಕರು ಇದೀಗ ನಾಯಕರ ಆಯ್ಕೆ ವಿಚಾರದಲ್ಲಿ ಕ್ಯಾರೆ ಎನ್ನುತ್ತಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ.
ಇಂದು ಯಾವ ಗಳಿಗೆಯಲ್ಲಾದರೂ ಬಿಜೆಪಿ ವಿಪಕ್ಷ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಇಂದು ಸಹ ಹೆಸರು ಘೋಷಣೆಯಾಗದಿದ್ದರೆ, ಬಿಜೆಪಿಗೆ 30 ವರ್ಷದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೇ ಸದನ ಎದುರಿದ ಪಕ್ಷ ಎಂಬ ಕಳಂಕ ಸುತ್ತಿಕೊಳ್ಳಲಿದೆ.












Click it and Unblock the Notifications