25 ಗ್ರಾಮದ 9,600 ಎಕರೆ ಭೂಸ್ವಾಧೀನಕ್ಕೆ ಭಾರೀ ವಿರೋಧ: ಭೂಮಿಗೆ ಚಿನ್ನದ ಬೆಲೆ ಕೊಟ್ಟರೂ ಬೇಡ!
ಬೆಂಗಳೂರು ಅಭಿವೃದ್ಧಿ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಒತ್ತಡ ಸೃಷ್ಟಿ ಆಗುತ್ತಿರುವುದರಿಂದ ಬೆಂಗಳೂರಿಗೆ ಪರ್ಯಾಯವಾಗಿ ಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಆದರೆ, ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿದೆ. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಸುಮಾರು 25 ಗ್ರಾಮದ 9600 ಎಕರೆಯಷ್ಟು ಫಲವತ್ತಾದ ಭೂ ಪ್ರದೇಶವನ್ನು ರೈತರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ರೈತರು ಪ್ರತಿಭಟನೆಯನ್ನು ನಡೆಸಿದ್ದು. ಭೂಮಿಗೆ ಬಂಗಾರದ ಬೆಲೆ ಬಂದರೂ ಭೂಮಿ ಬಿಟ್ಟುಕೊಡುವುದಿಲ್ಲ ಅಂತ ಜನ ಹೇಳುತ್ತಿದ್ದಾರೆ.
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಬೇಡ ಎಂದು ಸಂಸದ ಡಾ.ಸಿ ಎನ್ ಮಂಜುನಾಥ್ ಅವರು ಹೇಳಿದ್ದಾರೆ. ಈ ಭಾಗದಲ್ಲಿ ಭೂಸ್ವಾಧೀನ ಬೇಡ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೇನೆ. ಅಲ್ಲದೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ, ಸಂಸದ ಎಚ್.ಡಿ ದೇವೇಗೌಡ ಅವರು ಸಹ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ ರೈತರ ಬೆನ್ನೆಲುಬು ಮುರಿದಂತೆ ಎಂದು ಅವರು ಹೇಳಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ರೈತರು ಹಾಗೂ ಅನೇಕ ರೈತಪರ ಸಂಘಟನೆಗಳು ಸೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂ ಸ್ವಾಧೀನದ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಡೆದಿದ್ದು. ಅದರಲ್ಲಿ ಅವರು ಮಾತನಾಡಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ ಮೂರು ವಾರದ ಹಿಂದೆಯೇ ನಾನು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಎಚ್.ಡಿ ದೇವೇಗೌಡರು ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಈ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ ರೈತರ ಬೆನ್ನೆಲುಬು ಮುರಿದಂತೆ ಆಗುತ್ತದೆ.
ಹಣ ಶಾಶ್ವತ ಅಲ್ಲ ಭೂಮಿ ಶಾಶ್ವತ. ಹಸಿದ ಹೊಟ್ಟೆಗೆ ಚಿನ್ನಕ್ಕಿಂತ ಅನ್ನಮುಖ್ಯ. ದೇಶದಲ್ಲಿ ಪ್ರತಿ ವರ್ಷ ಬೇಸಾಯ ಜಮೀನು ಕಡಿಮೆಯಾಗುತ್ತಿದೆ. ಇನ್ನೊಂದು ಕಡೆ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಹಣ ಕೇವಲ ಒಂದು ಜನರೇಷನ್‌ಗೆ ಮಾತ್ರ ಸೀಮಿತವಾಗುತ್ತದೆ. ಭೂಮಿ ಸೂರ್ಯ ಚಂದ್ರ ಇರುವ ತನಕ ಶಾಶ್ವತವಾಗಿ ಇರಲಿದೆ. ರೇಷ್ಮೆ ಸೀಮೆಯಾಗಿರುವ ರಾಮನಗರ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ, ಈಗ ಎರಡನೇ ಸ್ಥಾನಕ್ಕೆ ಕುಸಿತಕಂಡಿದೆ. ಸರ್ಕಾರ ಈ ಯೋಜನೆಯನ್ನು ಇಲ್ಲಿಗೆ ಕೈ ಬಿಡಬೇಕು. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದ್ದೆ ಇದೆ ಎಂದು ಇದೇ ವೇಳೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಭೂಸ್ವಾಧೀನವನ್ನು ವಿರೋಧಿಸಿ ಭಾರೀ ಅಭಿಯಾನ ನಡೆದಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಭೂಸ್ವಾಧೀನ ಮಾಡಬಾರದು ಎಂದು ರೈತರು ಆಗ್ರಹಿಸಿದ್ದಾರೆ. ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆಗೆ ಕೃಷಿ ಯೋಗ್ಯ ಭೂಮಿ ಬಳಕೆ ಬೇಡ ಎನ್ನುವ ಆಗ್ರಹ ಕೇಳಿ ಬಂದಿದೆ.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್ ಗೌಡ ಅವರು, ರಾಮನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷರು,ಮಾಜಿ ಶಾಸಕರಾದ ಎ. ಮಂಜು, ಬಿಜೆಪಿ ಮುಖಂಡರುಗಳಾದ ಗೌತಮ್ ಗೌಡ ಅವರು, ಪ್ರಸಾದ್ ಗೌಡ ಅವರು ಹಾಗೂ ಹಲವು ಮುಖಂಡರುಗಳು, ಸಾವಿರಾರು ರೈತ ಬಾಂಧವರು ಹಾಜರಿದ್ದರು.












Click it and Unblock the Notifications