'ಭಾರತಾಗಮನ' ಯಕ್ಷಗಾನ ನೋಡಲು ಮರೆಯದಿರಿ
ಬೆಂಗಳೂರು, ಆಗಸ್ಟ್, 08 : ನಗರದ ಪಲ್ಲವಿ ಸಾಂಸ್ಕೃತಿಕ ವೇದಿಕೆ ಟ್ರಸ್ಟ್ ಯಕ್ಷಗಾನ-ಭಾವಯಾನ ಎಂಬ ವಿಶಿಷ್ಟ ಪ್ರಯೋಗ ಕೈಗೊಂಡಿದ್ದು, ಆಗಸ್ಟ್ 9ರ, ಭಾನುವಾರದಂದು ಸತತ 5 ಗಂಟೆಗಳ ಕಾಲ ಯಕ್ಷಗಾನದ ರಸದೌತಣ ದೊರಕಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿರುವ 'ಭಾರತಾಗಮನ' ಪ್ರಸಂಗವು ದೊಡ್ಡ ಬಸವನಗುಡಿ ರಸ್ತೆಯ ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ಮಧ್ಯಾಹ್ನ 3.30ರಿಂದ ರಾತ್ರಿ 8.30ರ ವರೆಗೆ ಏರ್ಪಡಿಸಲಾಗಿದೆ.[ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ ಪ್ರಕಟ]

ಯಕ್ಷಗಾನವು ಮಧ್ಯಾಹ್ನ 3.30ರಿಂದ ಆರಂಭವಾಗಲಿದ್ದು, ಬಲಿಪ ಶಿವಶಂಕರ ಭಟ್ (ಭಾಗವತರು), ಆನಂದ ಗುಡಿಗಾರ್ (ಮದ್ದಳೆ), ವೇಣುಗೋಪಾಲ್ ಪಡ್ರೆ (ಚಂಡೆ) ವಾದಕರಾಗಿ ಹಿಮ್ಮೇಳವನ್ನು ನಿರ್ವಹಿಸಲಿದ್ದಾರೆ. ಅರ್ಥಧಾರಿಗಳಾಗಿ ಮೇಲು ಕೋಟೆಯ ಉಮಾಕಾಂತ್ ಭಟ್, ಡಾ. ವಸಂತ ಭಾರದ್ವಾಜ ಕಬ್ಬಿನಾಲೆ, ಶಶಾಂಕ ಅರ್ನಾಡಿ, ನಾರಾಯಣ ಭಟ್ ವೇದಿಕೆ ಹತ್ತಲಿದ್ದು, ಯಕ್ಷಗಾನ ಕಳೆಕಟ್ಟುವಂತೆ ಮಾಡಲಿದ್ದಾರೆ.
ಸಂಜೆ 5.30ರಿಂದ ಅಮೃತ ಸಿಂಚನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಕವಿಗಳಾದ ಎಂ.ಎನ್ ವ್ಯಾಸರಾವ್, ಅಧ್ಯಕ್ಷರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿಯಾದ ಮಂಜುನಾಥ್ ಭಟ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ 75 ವರ್ಷ ಪೂರೈಸಿದ ನಾಡಿನ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ.
ಸುಬ್ರಾಯ ಚೊಕ್ಕಾಡಿ ವಿರಚಿತ ಗೀತೆಗಳ ಗಾಯನ ಹಾಗೂ ಯಕ್ಷಗಾಯನವು ಗಣೇಶ ದೇಸಾಯಿ ಅವರ ತಂಡದೊಂದಿಗೆ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಮುಂದುವರೆಯಲಿದೆ. ಸುಬ್ರಾಯ ಚೊಕ್ಕಾಡಿ ಅವರು ಯಕ್ಷಗಾನ ನಡೆಸಿಕೊಡಲಿದ್ದಾರೆ.












Click it and Unblock the Notifications