ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣ: ಸಿನಿಮಾ ಶೈಲಿ ಕಾರ್ಯಾಚರಣೆ, ಆರೋಪಿ ಅರೆಸ್ಟ್!
ಬೆಂಗಳೂರಿನ ಜನ ಬೆಚ್ಚಿ ಬೀಳುವುದಕ್ಕೆ ಕಾರಣವಾಗಿದ್ದ ನಗರದ ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಯುವತಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ / ಬೀದಿ ಕಾಮುಕನನ್ನು ಬಂಧಿಸುವಲ್ಲಿ ಕೊನೆಗೂ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಈ ಪ್ರಕರಣವು ರಾಜ್ಯದಲ್ಲಿ ಜನ ಬೆಚ್ಚಿ ಬೀಳುವುದಕ್ಕೆ ಕಾರಣವಾಗಿತ್ತು. ಬೆಂಗಳೂರಿನಂತಹ ಪ್ರಮುಖ ನಗರದಲ್ಲಿಯೇ ಈ ರೀತಿ ಬೆಳವಣಿಗೆ ನಡೆದರೆ, ಬೇರೆ ಪ್ರದೇಶಗಳಲ್ಲಿ ಹೇಗೆ ಎನ್ನುವ ಚರ್ಚೆ ಶುರುವಾಗಿತ್ತು.
ನಗರದ ಎಸ್‌ಜಿ ಪಾಳ್ಯದಲ್ಲಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಈ ಆರೋಪಿಯನ್ನು ಬೆಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ನಗರದಲ್ಲಿ ಏಪ್ರಿಲ್ 3ಕ್ಕೆ ಈ ಘಟನೆ ನಡೆದಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಯು ಕೃತ್ಯ ಎಸಗಿ ಪರಾರಿಯಾಗಿದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಇನ್ನು ಈ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆರೋಪಿಯ ನಡುವೆ ಯಾವುದೇ ಪೂರ್ವ ಪರಿಚಯ ಇರಲಿಲ್ಲ ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ ಏನು: ಬೆಂಗಳೂರಿನಲ್ಲಿ ಯುವತಿಯರಿಬ್ಬರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಯವತಿಯೊಬ್ಬರ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸೆದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಏಪ್ರಿಲ್ 3ರ ಬೆಳಿಗ್ಗೆ ಸುಮಾರು 1:55ರ ವೇಳೆಗೆ ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಇಬ್ಬರು ಕಿರುಚಾಡಿದ್ದು ಹಾಗೂ ಸಹಾಯಕ್ಕಾಗಿ ಕೇಳುತ್ತಿದ್ದ ದೃಶ್ಯಗಳು ಸಹ ಸೆರೆಯಾಗಿತ್ತು.
ಇದೀಗ ಆರೋಪಿಯ ಬಂಧನವಾಗಿದೆ. ನಗರದ ತಿಲಕ್ ನಗರದ ಗುಲ್ಬರ್ಗ ಕಾಲೋನಿ ನಿವಾಸಿ ಸಂತೋಷ್ ಡೇನಿಯಲ್ (29) ಎಂದು ಗುರುತಿಸಲಾಗಿದೆ. ಘಟನೆ ನಡೆದು ಹತ್ತು ದಿನಗಳ ನಂತರ ಆರೋಪಿ ಸೆರೆ ಸಿಕ್ಕಿದ್ದಾನೆ. ಆತನನ್ನು ಕೇರಳದ ಕೋಝಿಕ್ಕೋಡ್‌ನಲ್ಲಿ ಬಂಧಿಸಲಾಗಿದೆ. ಇತ ಬೆಂಗಳೂರಿನಲ್ಲಿ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ತೀವ್ರ ಕಾರ್ಯಾಚರಣೆಯ ನಂತರ ಆರೋಪಿ ಸೆರೆಸಿಕ್ಕಿದ್ದಾನೆ.
700 ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ: ಆರೋಪಿಯ ಬಂಧನಕ್ಕೆ ವಿಶೇಷ ಕಾರ್ಯಾಚರಣೆಯನ್ನು ಕರ್ನಾಟಕದ ಪೊಲೀಸರು ನಡೆಸಿದ್ದರು. ಘಟನೆ ನಡೆದ ಬೆನ್ನಲ್ಲೇ ಬೆಂಗಳೂರಿನ ಎಸ್.ಜಿ. ಪಾಳ್ಯ, ಮಡಿವಾಳ, ತಿಲಕ್‌ನಗರ, ಬೊಮ್ಮನಹಳ್ಳಿ ಮತ್ತು ಆಡುಗೋಡಿ ಸೇರಿದಂತೆ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಆತನ ಬೈಕ್ ಹಾಗೂ ಬಟ್ಟೆ ಆಧರಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು ಎಂದು ಹೇಳಲಾಗಿದೆ.
ಮೂರು ರಾಜ್ಯಗಳಲ್ಲಿ ಕಾರ್ಯಾಚರಣೆ: ಇನ್ನು ಆರೋಪಿಯನ್ನು ಬಂಧಿಸುವುದಕ್ಕಾಗಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕರ್ನಾಟಕದಿಂದ ಪರಾರಿಯಾಗಿದ್ದಾನೆ ಎನ್ನುವುದು ಖಚಿತವಾದ ಮೇಲೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಡಿಸಿಪಿ ಸಾರಾ ಫಾತಿಮಾ ಅವರು ಆರೋಪಿಯನ್ನು ಪತ್ತೆಹಚ್ಚುವುದಕ್ಕೆ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಯಾವಾಗ ಕಾರ್ಯಾಚರಣೆ ಚುರುಕು ಪಡೆದುಕೊಂಡಿತೋ ಆಗ ಆರೋಪಿ ಮೊಬೈಲ್ ಬಿಸಾಕಿದ್ದಾನೆ. ನಂತರ ಪಕ್ಕಾ ಮಾಹಿತಿಯ ಆಧಾರದ ಮೇಲೆ ಸಿನಿಮೀಯ ಮಾದರಿಯಲ್ಲಿ ಈತನನ್ನು ಬಂಧಿಸಲಾಗಿದೆ. ಕೇರಳದಲ್ಲಿ ಆತನ ಸ್ನೇಹಿತ ಮನೆಯಲ್ಲಿದ್ದಾಗ ಸಂತೋಷನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಕುಡಿದ ಅಮಲಿನಲ್ಲಿ ಕೃತ್ಯ: ಇನ್ನು ಆರೋಪಿ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74 (ಮಹಿಳೆಯ ಘನತೆ ಕೆರಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 75 (ಲೈಂಗಿಕ ಕಿರುಕುಳ), ಮತ್ತು 78 (ಹಿಂಬಾಲಿಸುವುದು) ಸೇರಿದಂತೆ ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಸವಾಲಿನ ಕಾರ್ಯಾಚರಣೆ: ಕರ್ನಾಟಕದ ಪೊಲೀಸರಿಗೆ ಆರೋಪಿಯನ್ನು ಪತ್ತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆರೋಪಿ ಬೈಕ್ ಸಂಖ್ಯೆಯನ್ನು ಆಧರಿಸಿ ಕಾರ್ಯಾಚರಣೆ ಶುರು ಮಾಡಿಕೊಳ್ಳಲಾಗಿತ್ತು. ಮುಂದುವರಿದು ಆತ ತನ್ನ ಮೊಬೈಲ್ ಸಹ ಎಸೆದು ಪರರಾರಿಯಾಗಿದ್ದ. ಹೀಗಾಗಿ ಆತನನ್ನು ಟ್ಯಾಕ್ ಮಾಡುವುದು ಸವಾಲಿನಿಂದ ಕೂಡಿತ್ತು ಎಂದು ಹೇಳಲಾಗಿದೆ. 10 ಜನರನ್ನು ಒಳಗೊಂಡ ಪೊಲೀಸ್ ತಂಡವು ವಿಶೇಷ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಸೆರೆ ಹಿಡಿದಿದೆ.
ಅಲ್ಲೊಂದು ಇಲ್ಲೊಂದು ಘಟನೆ: ಇನ್ನು ಈ ಪ್ರಕರಣವು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದಿತ್ತು. ಸೂಕ್ಷ್ಮ ಪ್ರಕರಣದ ಬಗ್ಗೆ ಹೇಳಿಕೆ ನೀಡುವಾಗ ಗೃಹ ಸಚಿವ ಜಿ. ಪರಮೇಶ್ವರ್ ಅವರು ಎಡವಟ್ಟು ಮಾಡಿಕೊಂಡಿದ್ದರು. ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದರು. ಇದರು ಭಾರೀ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು. ಇದು ವಿವಾದ ಸ್ವರೂಪವನ್ನು ಪಡೆದುಕೊಂಡ ಮೇಲೆ ಜಿ ಪರಮೇಶ್ವರ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಚರ್ಚೆ: ಇನ್ನು ಈ ಪ್ರಕರಣದ ಬೆನ್ನಲ್ಲೇ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು. ರಾಜ್ಯ ಸರ್ಕಾರವು ಪದೇ ಪದೇ ಕಾನೂನು ಸುವ್ಯವಸ್ಥೆಯಲ್ಲಿ ಎಡವುತ್ತಿದೆ. ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಗಂಭೀರ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವ ಆಗ್ರಹಗಳು ಕೇಳಿ ಬಂದಿದ್ದವು.
ಈ ಬೆಳವಣಿಗೆಯ ನಡುವೆ ಜಿ. ಪರಮೇಶ್ವರ್ ಅವರ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications