Bengaluru Second Airport: 2ನೇ ಏರ್‌ಪೋರ್ಟ್ ಘೋಷಣೆ ಮುನ್ನವೇ ಈ ಪ್ರದೇಶಗಳಲ್ಲಿ ಭೂಮಿ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣವಾಗುವ ಜಾಗ ಇನ್ನೂ ಅಂತಿಮವಾಗಿಲ್ಲ. ರಾಜ್ಯ ಸರ್ಕಾರ ಹೊಸ ವಿಮಾನ ನಿಲ್ದಾಣಕ್ಕಾಗಿ ಎರಡು ಕಡೆ ಜಾಗಗಳನ್ನು ಗುರುತಿಸಿ ಕೇಂದ್ರದ ಗ್ರೀನ್‌ಸಿಗ್ನಲ್‌ಗಾಗಿ ಕಾಯುತ್ತಿದೆ. ಕನಕಪುರ ರಸ್ತೆ ಹಾಗೂ ಕುಣಿಗಲ್ ಬಳಿ ಗುರುತಿಸಿರುವ ಜಾಗಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ಪರಿಶೀಲಿಸಿದ್ದಾರೆ. ಮತ್ತೊಂದೆಡೆ ತುಮಕೂರು ಭಾಗದಲ್ಲಿ ಏರ್‌ಪೋರ್ಟ್ ಬೇಕು ಎನ್ನುವ ಡಿಮ್ಯಾಂಡ್ ಕೂಡ ಹೆಚ್ಚಾಗಿ ಕೇಳಿಬರುತ್ತಿದೆ. ಈ ಹೊಸ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗುತ್ತೆ ಎಂಬ ನಿಖರ ಮಾಹಿತಿ ಸದ್ಯಕ್ಕಂತೂ ಇಲ್ಲ. ಆದರೆ, ಏರ್‌ಪೋರ್ಟ್ ಬರುವ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಹೂಡಿಕೆದಾರರ ಕಣ್ಣಂತೂ ಈ ಜಾಗಗಳ ಮೇಲೆ ಬಿದ್ದಿದೆ.
ಕೆಲವರು ಕನಕಪುರ ರಸ್ತೆಯಲ್ಲೇ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಬರಲಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಕುಣಿಗಲ್ ಬಳಿ ಗುರುತಿಸಿರುವ ಜಾಗದಲ್ಲೇ ಏರ್‌ಪೋರ್ಟ್ ನಿರ್ಮಾಣವಾಗುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. ಇದೀಗ ತುಮಕೂರಿನ ಶಿರಾ ಅಥವಾ ಬುಕ್ಕಾಪಟ್ಟಣದ ಬಳಿ ವಿಮಾನ ನಿಲ್ದಾಣ ನಿರ್ಮಿಸಿ ಎಂದು ರಾಜಕಾರಣಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡವೂ ಹೇರುತ್ತಿದ್ದಾರೆ. ಒಂದು ಏರ್‌ಪೋರ್ಟ್ ಬರಲಿದೆ ಎಂದ ತಕ್ಷಣವೇ ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರೆ ಹೂಡಿಕೆದಾರರು ಹದ್ದಿನಕಣ್ಣಿಡುತ್ತಾರೆ. ಆದರೆ ವಿಶೇಷವೆಂದರೆ ಈಗ ಏರ್‌ಪೋರ್ಟ್ ನಿರ್ಮಾಣಕ್ಕೂ ಮುನ್ನವೇ ಹೂಡಿಕೆದಾರರು ಆಗಲೇ ಈ ಏರಿಯಾಗಳಿಗೆ ಎಂಟ್ರಿ ಕೊಟ್ಟಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್‌ಗಳು ಹಾಗೂ ಡೆವಲಪರ್‌ಗಳು ಈಗಾಗಲೇ ಭೂಮಿ ಖರೀದಿ ಹಾಗೂ ಮಾರಾಟದ ಬಗ್ಗೆ ದೊಡ್ಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕನಕಪುರ ಮುಖ್ಯ ರಸ್ತೆಯಲ್ಲೇ ಈ ಪ್ರಸ್ತಾವಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಫೈನಲ್ ಆದಲ್ಲಿ, ಕನಕಪುರ ಮುಖ್ಯ ರಸ್ತೆಯಲ್ಲಿ ಈಗಾಗಲೇ ಹೆಚ್ಚಿರುವ ಭೂಮಿಯ ಬೆಲೆಗಳು ಮತ್ತೆ ಗಗನಕ್ಕೇರುವ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಹೂಡಿಕೆ ಮಾಡಲು ಜನ ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ.
ಕೆಲವೇ ವರ್ಷಗಳಲ್ಲಿ ಕನಕಪುರ ರಸ್ತೆ ಭಾರೀ ಬೆಳವಣಿಗೆಯನ್ನು ಕಂಡಿದೆ. ವಿಶೇಷವಾಗಿ ಬೆಂಗಳೂರನ್ನು ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-209ರ ಅಗಲೀಕರಣ ಹಾಗೂ ದ್ವಿಪಥವಾಗಿ ಅಭಿವೃದ್ಧಿ ಮಾಡಲಾಗಿದೆ. ಇದರಿಂದಲೂ ಈ ಭಾಗದಲ್ಲಿ ಭೂಮಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ ಏರ್‌ಪೋರ್ಟ್ ಇದೇ ಭಾಗದಲ್ಲಿ ಬಂದರೆ ರಿಯಲ್ ಎಸ್ಟೇಟ್‌ನವರು ಲಾಭ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಕನಕಪುರ ರಸ್ತೆಯಲ್ಲಿ ಈಗಾಗಲೇ ಕೋಟಿ ದಾಟಿದ ಭೂಮಿ ಬೆಲೆ!
ಕೆಲವು ವರ್ಷಗಳ ಹಿಂದೆ ಕನಕಪುರ ರಸ್ತೆಯ ಪಕ್ಕದಲ್ಲಿರುವ ಒಂದು ಎಕರೆ ಭೂಮಿಯನ್ನು ಹೆಚ್ಚೆಂದರೆ 2 ಕೋಟಿ ರೂಪಾಯಿಗೆ ಖರೀದಿಸಬಹುದಾಗಿತ್ತು. ಈಗ ಕನಕಪುರ ರಸ್ತೆಯ ಎರಡೂ ಬದಿಗಳಲ್ಲಿರುವ ಒಳ ಪ್ರದೇಶಗಳಲ್ಲೂ ಕೂಡ ಒಂದು ಎಕರೆಗೆ ಕನಿಷ್ಠ 8 ಕೋಟಿ ರೂವರೆಗೆ ದರ ನಿಗದಿಯಾಗಿದೆ. ಮುಖ್ಯ ರಸ್ತೆಯಲ್ಲಿ ಈ ದರ ದುಪ್ಪಟ್ಟಾಗಿದೆ ಎಂದು ವರದಿಯಾಗಿದೆ.
ನೆಲಮಂಗಲ-ಕುಣಿಗಲ್ ರಸ್ತೆಯ ಸಮೀಪ ಗುರುತಿಸಿರುವ ಜಾಗದ ಸುತ್ತಮುತ್ತಲಿನ ಪ್ರದೇಶದಲ್ಲೂ ರಿಯಲ್ ಎಸ್ಟೇಟ್ ಏಜೆಂಟರ ಓಡಾಟ ಹೆಚ್ಚಾಗಿದೆ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಆಗಿರುವುದರಿಂದ ಇದೇ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ. ನೆಲಮಂಗಲದ ಬಳಿ ವಿಮಾನ ನಿಲ್ದಾಣ ಬಂದರೆ, ಅದು ಕರ್ನಾಟಕಕ್ಕೆ ಸಂಪೂರ್ಣವಾಗಿ ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಡೀಲರ್‌ಗಳು, ಆಸ್ತಿ ಖರೀದಿದಾರರು ಈ ಎರಡೂ ಜಾಗಗಳಿಗೆ ಲಗ್ಗೆ ಇಟ್ಟಿದ್ದಾರೆ. ಸ್ಥಳ ಘೋಷಣೆಯಾದ ಕೂಡಲೇ ಆಸ್ತಿ ಖರೀದಿ-ಮಾರಾಟ ಚುರುಕುಗೊಳ್ಳಲಿದೆ.












Click it and Unblock the Notifications