Bengaluru Sambar: ಬೆಂಗಳೂರು ಹೋಟೆಲ್‌ಗಳಲ್ಲಿ ಸಾಂಬಾರ್ ಸ್ವೀಟ್ ಯಾಕೆ, ಇಲ್ಲಿದೆ ಕನ್ನಡಿಗರ ಯಕ್ಷ ಪ್ರಶ್ನೆಗೆ ಉತ್ತರ
Bengaluru Sambar: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ನಂತರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳಲ್ಲಿ ಬೆಂಗಳೂರು ಸಾಂಬಾರ್ ವಿಚಾರವೂ ಒಂದು. ಕರ್ನಾಟಕದ ಸಾಂಬಾರ್ - ಬೆಂಗಳೂರು ಸಾಂಬಾರ್‌ನ ಬಗ್ಗೆ ಹೆಚ್ಚು ಆಗುವುದು ಇದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ಸಾಂಬಾರ್ ಸ್ವಲ್ಪ ಸಿಹಿಯಾಗಿರುತ್ತದೆ ಎನ್ನುವುದು. ಬೆಂಗಳೂರು ಅಥವಾ ಕರ್ನಾಟಕದ ಯಾವುದೇ ಭಾಗದಲ್ಲಾದರೂ ಮನೆಗಳಲ್ಲಿ ಮಾಡುವ ಸಾಂಬಾರ್‌ನಲ್ಲಿ ಸಿಹಿ ಬಳಕೆ ಮಾಡುವುದು ಅಪರೂಪ, ಖಾರ ಹೆಚ್ಚಾದರೆ ಅಲ್ಪ ಪ್ರಮಾಣದಲ್ಲಿ ಬೆಲ್ಲ ಸೇರಿಸುವುದು ವಾಡಿಕೆ. ಉಪ್ಪು ಅಥವಾ ಖಾರ ಹೆಚ್ಚಾದರೆ ಸಾಂಬಾರ್‌ಗೆ ಆಲೂಗಡ್ಡೆ ಬಳಕೆ ಮಾಡುವುದು ಇದೆ.
ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಲ್ಲಿ ಸಾಂಬಾರ್ ಸಿಹಿಯಾಗಿರುವುದು ಇದೆ. ಸಾಂಬಾರ್‌ಗೆ ಸ್ವೀಟ್ ಬಳಸುವುದೇಕೆ ಎಂದು ಜನ ಇಂದಿಗೂ ಪ್ರಶ್ನೆ ಮಾಡುವುದು ಇದೆ. ಬೇರೆ ರಾಜ್ಯದವರಿಗೆ ಇರಲಿ, ಕನ್ನಡಿಗರಿಗೇ ಇದು ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕನ್ನಡಿಗರ ಬಹುದಿನಗಳ ಪ್ರಶ್ನೆ ಹಾಗೂ ಕುತೂಹಲಕ್ಕೆ ಉತ್ತರ ಹುಡುಕುವ ಪ್ರಯತ್ನ ಈ ಲೇಖನದಲ್ಲಿದೆ.

ಬೆಂಗಳೂರಿನ ಹೋಟೆಲ್‌ಗಳಲ್ಲಿ ಸಾಂಬಾರ್ ಸ್ವೀಟ್ ಆಗಿರುವುದೇಕೆ
ಇನ್ನು ಬೆಂಗಳೂರಿನ ಹೋಟೆಲ್‌ಗಳಲ್ಲಿ ಸಾಂಬಾರ್‌ಗೆ ಸ್ವೀಟ್ ಪದಾರ್ಥ ಹಾಕುವುದು ಅಥವಾ ಸಿಹಿ ಸೇರಿಸುವುದು ಹೊಸದೇನು ಅಲ್ಲ. ಮುಖ್ಯವಾಗಿ ಉಡುಪಿ ಹೋಟೆಲ್‌ಗಳಲ್ಲಿ ಸಾಂಬಾರ್‌ಗೆ ಸ್ವೀಟ್ ಸೇರಿಸುವುದು ಇದೆ. ಬೆಂಗಳೂರು ಅಥವಾ ಕರ್ನಾಟಕ ಶೈಲಿಯ ಸಾಂಬಾರ್‌ನಲ್ಲಿ ಸಿಹಿ (ಬೆಲ್ಲ) ಸೇರಿಸಲು ಮುಖ್ಯವಾಗಿ ರುಚಿಯ ಸಮತೋಲನ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿ ಕಾರಣಗಳಾಗಿವೆ. ಆದರೆ ಇದು ಕರ್ನಾಟಕದ ಎಲ್ಲಾ ಭಾಗಗಳಲ್ಲೂ ರೂಢಿಯಲ್ಲಿ ಇಲ್ಲ. ಮನೆಗಳಲ್ಲಿ ಮಾಡುವ ಸಾಂಬಾರ್‌ನಲ್ಲಿ ಸಿಹಿ ಬಳಕೆ ಮಾಡುವುದು ತೀರ ವಿರಳ.
ಮುಖ್ಯವಾಗಿ ಸಾಂಬಾರ್‌ನಲ್ಲಿ ಬೆಲ್ಲದ ಸಣ್ಣ ತುಂಡು ಬಳಕೆ ಮಾಡುವುದಕ್ಕೆ ಮುಖ್ಯ ಕಾರಣವೆಂದರೆ, ಸಾಂಬಾರ್‌ನ ರುಚಿಯ ಸಮತೋಲನ ಕಾಪಾಡಿಕೊಳ್ಳುವುದು. ಹುಣಸೆಹಣ್ಣಿನ ಹುಳಿ ಮತ್ತು ಮಸಾಲೆ ಪದಾರ್ಥಗಳ ಖಾರವನ್ನು ಸಮತೋಲನಗೊಳಿಸುವ ಉದ್ದೇಶದಿಂದ ಒಂದು ಸಣ್ಣ ತುಂಡು ಬೆಲ್ಲವನ್ನು ಸೇರಿಸಲಾಗುತ್ತದೆ. ಇದು ಸಾಂಬಾರ್‌ನ ಒಟ್ಟಾರೆ ರುಚಿಯನ್ನು ಹೆಚ್ಚಿಸುತ್ತದೆ ಎನ್ನುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಸಿಡಿಟಿ ಕಡಿಮೆ ಮಾಡಲು - ಪ್ರಾದೇಶಿಕ ಸಂಪ್ರದಾಯ
ಸಾಂಬಾರ್‌ನಲ್ಲಿ ಸಣ್ಣ ಬೆಲ್ಲದ ಚೂರು ಹಾಕುವುದರ ಹಿಂದೆ ಆರೋಗ್ಯ ಕಾಳಜಿಯೂ ಇದೆ. ಮಸಾಲೆ ಪದಾರ್ಥಗಳಿಂದ ದೇಹದಲ್ಲಿ ಉಂಟಾಗಬಹುದಾದ ಅಸಿಡಿಟಿ ಅಥವಾ ಎದೆಯುರಿಯಂತಹ ಅನುಭವವನ್ನು ಕಡಿಮೆ ಮಾಡುವ ಉದ್ದೇಶದಿಂದಲೂ ಬೆಲ್ಲ ಸಹಕಾರಿಯಾಗಿದೆ. ಅಲ್ಲದೆ ಹಳೆಯ ಮೈಸೂರು ಭಾಗ ಮತ್ತು ಬೆಂಗಳೂರಿನಲ್ಲಿ ಸಾಂಬಾರ್‌ಗೆ ಬೆಲ್ಲ ಹಾಕುವುದು ತಲೆತಲಾಂತರದಿಂದ ಬಂದ ಸಂಪ್ರದಾಯವಾಗಿದೆ. ದರ್ಶಿನಿ ಶೈಲಿಯ ಹೋಟೆಲ್‌ಗಳಲ್ಲಿಯೂ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಕೆಲವು ಉಡುಪಿ ಹೋಟೆಲ್‌ಗಳಲ್ಲೂ ಸಾಂಬಾರ್‌ಗೆ ಬೆಲ್ಲವನ್ನು ಬಳಕೆ ಮಾಡುವುದು ಇದೆ. ಬೆಂಗಳೂರು ಸಾಂಬಾರ್‌ನಲ್ಲಿ ಕಾಯಿತುರಿ ಮತ್ತು ಬೆಲ್ಲದ ಮಿಶ್ರಣವು ಅದಕ್ಕೆ ವಿಶಿಷ್ಟವಾದ ಸಿಹಿ ಮಿಶ್ರಿತ ರುಚಿಯನ್ನು ಕೊಡುತ್ತದೆ. ಒಟ್ಟಾರೆಯಾಗಿ, ಸಾಂಬಾರ್ ಕೇವಲ ಖಾರ ಅಥವಾ ಹುಳಿ ಮಾತ್ರ ಆಗಿರದೆ ಸಿಹಿ-ಹುಳಿ-ಖಾರದ ಹದವಾದ ಮಿಶ್ರಣವಾಗಿರಲಿ ಎನ್ನುವುದು ಸಹ ಇದರ ಉದ್ದೇಶವಾಗಿದೆ.












Click it and Unblock the Notifications