ಬೆಂಗಳೂರಿನ ಈ ಭಾಗದಲ್ಲಿ 58.44 ಕೋಟಿ ಮೊತ್ತದ ಯೋಜನೆ: 5 ಪ್ರದೇಶಗಳಿಗೆ ಲಾಭ!
ಬೆಂಗಳೂರಿನ ವಿವಿಧ ಭಾಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಬೆಂಗಳೂರಿನ ವಿವಿಧ ಭಾಗದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಪೇಟೆ ರಸ್ತೆಯ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ಗಾಂಧಿನಗರ ವಿಧಾನ ಸಭಾಕ್ಷೇತ್ರದ ಚಿಕ್ಕಪೇಟೆ ವ್ಯಾಪ್ತಿಯ ರಸ್ತೆಗಳು ನಗರದ ಕೇಂದ್ರ ಭಾಗದ ರಸ್ತೆಗಳಾಗಿದ್ದು, ಅತಿ ಹೆಚ್ಚು ವಾಹನ ದಟ್ಟಣೆ ಹಾಗೂ ಅತ್ಯಂತ ಕಿರಿದಾದ ರಸ್ತೆಗಳಾಗಿದ್ದು ಹೆಚ್ಚು ಜನನಿಬಿಡ ರಸ್ತೆಗಳಾಗಿವೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆ ಪ್ರದೇಶವು ಬೆಂಗಳೂರು ಕೇಂದ್ರ ಭಾಗದಲ್ಲಿದ್ದು, ವ್ಯವಹಾರ ವಹಿವಾಟಿನಿಂದ ಕೂಡಿರುತ್ತದೆ. ಹಗಲಿನಲ್ಲಿ ಭಾರಿ ಸಂಖ್ಯೆಯ ಜನ ಓಡಾಡುವುದರೊಂದಿಗೆ ವಾಹನ ಸಂಚಾರವೂ ಹೆಚ್ಚಾಗಿರುತ್ತದೆ. ರಾತ್ರಿ ವೇಳೆಯಲ್ಲಿ ಸಹ ಸರಕು ವಾಹನಗಳ ಓಡಾಟ ಸಂಖ್ಯೆ ಜಾಸ್ತಿ ಇರುತ್ತದೆ.

ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಬೆಂಗಳೂರು ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳಿರುವುದರಿಂದ ಈ ಪ್ರದೇಶಕ್ಕೆ ಬಂದು ಹೋಗುವ ಹಾಗೂ ಈ ಪ್ರದೇಶದಿಂದ ಹಾದು ಹೋಗುವ ವಾಹನಗಳ ಸಂಖ್ಯೆ ಸಹ ಹೆಚ್ಚಾಗಿದೆ. ಹೀಗಾಗಿ ಸಮಗ್ರವಾಗಿ ರಸ್ತೆಯನ್ನು ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ವೈಟ್ ಟಾಪಿಂಗ್ ರಸ್ತೆ ಯೋಜನೆಯ ಒಟ್ಟು ಅಂದಾಜು ಮೊತ್ತವು 58.44 ಕೋಟಿ ರೂಪಾಯಿ ಆಗಿದೆ. ಕಾಮಗಾರಿಯ ಸ್ಥಳವು ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಪೇಟೆ ಹಾಗೂ ರೇಸ್ ಕೋರ್ಸ್ ರಸ್ತೆ ಸೇರಿದೆ. ಈ ಯೋಜನೆಯಿಂದ ಚಿಕ್ಕಪೇಟೆ, ಗಾಂಧಿನಗರ, ಅವೆನ್ಯೂ ರಸ್ತೆ, ಕಾಟನ್‌ಪೇಟೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಅನುಕೂಲವಾಗಲಿದೆ. ಗಾಂಧಿನಗರ ಕ್ಲಸ್ಟರ್ ರಸ್ತೆಯ ಒಟ್ಟು ಉದ್ದ - 5.57 ಕಿ.ಮೀ, ಮಳೆ ನೀರು, ಒಳಚರಂಡಿ ಪೈಪ್ ಲೈನ್‌ಗಳು ರಸ್ತೆಯ ಮಧ್ಯಭಾಗದಲ್ಲಿ ಮತ್ತು ಯುಟಿಲಿಟಿಯು ರಸ್ತೆಯ ಎರಡು ಬದಿಗಳಲ್ಲಿ ಒಳಗೊಂಡಂತೆ 2.7 ಮೀ ಅಗಲದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಇದಾಗಿದೆ.
ಈ ಯೋಜನೆಯು ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಉದ್ದೇಶವನ್ನು ಒಳಗೊಂಡಿದೆ. ಪ್ರಾಸ್ತಾಪಿತ ಯೋಜನೆಯಲ್ಲಿ ಟ್ರಾಫಿಕ್ ನಿಯಮಾವಳಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಲಾಗಿದ್ದು, ಇದರಿಂದ ವಾಹನ ಸರಳವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಆಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications