ಜಕಾರ್ತಾಗೆ ಸಾಧ್ಯವಾಗಿದ್ದು ಬೆಂಗಳೂರಿಗೆ ಯಾಕೆ ಆಗಲಿಲ್ಲ: ಚರ್ಚೆ ಹುಟ್ಟಿಸಿದ ಒಂದು ಪೋಸ್ಟ್
ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರು ದಟ್ಟಣೆಯಲ್ಲೂ ಮುಂದಿದೆ. ಬೆಂಗಳೂರಿನ ನಗರ ಮೂಲಸೌಕರ್ಯವು ಅಚ್ಚುಕಟ್ಟಾಗಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಅಲ್ಲಿ ಇನ್ನೂ ಲೋಪಗಳಿವೆ ಎಂಬ ಬಗ್ಗೆ ಸಾರ್ವಜನಿಕರು ಆಗಾಗ ಧ್ವನಿ ಎತ್ತುತ್ತಾರೆ. ಇದೇ ವಿಚಾರವಾಗಿ ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಎತ್ತಿರುವ ಪ್ರಶ್ನೆಯು ಬೆಂಗಳೂರಿಗರಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರು ನಗರ ಮೂಲಸೌಕರ್ಯವನ್ನು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಗೆ ಹೋಲಿಸಿ ಬೆಂಗಳೂರಿನ ನಿವಾಸಿಯೊಬ್ಬರು ಎಕ್ಸ್‌ನಲ್ಲಿ (ಟ್ವಿಟರ್) ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. "ಬೆಂಗಳೂರಿಗಿಂತ ಎರಡು ಪಟ್ಟು ಹೆಚ್ಚು ಜನಸಂಖ್ಯೆ ಇರುವ ಜಕಾರ್ತಾದಲ್ಲಿ ಪ್ರತ್ಯೇಕ ಬಸ್ ಮತ್ತು ಸೈಕಲ್ ಲೇನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ ನಾವು ಅದನ್ನು ಏಕೆ ನಿರ್ಮಿಸಬಾರದು? ಆ ಯೋಜನೆಗಳಿಗೆ ನಾವು ಖರ್ಚು ಮಾಡುತ್ತಿರುವ 1 ಲಕ್ಷ ಕೋಟಿಗಿಂತ ಕಡಿಮೆ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ರಾಜಧಾನಿ ಬೆಂಗಳೂರು ತನ್ನ ಬೃಹತ್ ಮೂಲಸೌಕರ್ಯ ಬಜೆಟ್‌ನ ಹೊರತಾಗಿಯೂ, ಅಂತಹ ಅಗತ್ಯ ವೈಶಿಷ್ಟ್ಯಗಳನ್ನು ಏಕೆ ನಿರ್ಲಕ್ಷಿಸುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಸಖತ್ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನೂ ಹುಟ್ಟುಹಾಕಿದೆ, ಸಾರ್ವಜನಿಕ ಸಾರಿಗೆ ಮತ್ತು ಪಾದಚಾರಿ ಸ್ನೇಹಿ ಯೋಜನೆಗೆ ಇಲ್ಲಿ ಎಷ್ಟು ಆದ್ಯತೆ ಕೊಡಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಜಕಾರ್ತಾ 1971ರಲ್ಲಿ ಹಾಗೂ 2021ರಲ್ಲಿ ಹೇಗಿದೆ? ಅಲ್ಲಿನ ರಸ್ತೆಗಳು ಹೇಗಿದ್ದವು ಎಂದು ಹೋಲಿಕೆ ಮಾಡಿರುವ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇಂಡೋನೇಷ್ಯಾದ ಈ ನಗರವು ದಶಕಗಳಿಂದಲೂ ನಗರ ಸಾರಿಗೆ ಯೋಜನೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಹಲವರು ಉಲ್ಲೇಖಿಸಿದ್ದಾರೆ.

ಜಕಾರ್ತಾದಲ್ಲಿ ಬಸ್ ಮತ್ತು ಸೈಕಲ್ ಸಂಚಾರಕ್ಕೆ ಮೀಸಲು ಲೇನ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಮೂಲಸೌಕರ್ಯಕ್ಕಾಗಿ ದೊಡ್ಡ ಬಜೆಟ್ ವ್ಯಯ ಮಾಡಲಾಗುತ್ತಿದೆ ಎಂದು ಹೆಮ್ಮೆಪಡಲಾಗುತ್ತಿದೆಯೇ ಹೊರತು ಮೂಲ ಮೂಲಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ ಎಂದು ಈ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಈ ಪೋಸ್ಟ್ ಹಂಚಿಕೊಂಡ ಒಂದೇ ದಿನದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಇದು ಬೆಂಗಳೂರಿನಲ್ಲಿ ಪಾದಚಾರಿ ಸ್ನೇಹಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಬೆಂಗಳೂರಿನ ಕೆಲವು ಪ್ರದೇಶಗಳು ಈಗಲೂ ಹೆಚ್ಚು ನಿರ್ಲಕ್ಷಿಸಲ್ಪಟ್ಟಿವೆ. ಬೆಂಗಳೂರಿನಲ್ಲಿ ಸುಧಾರಿತ ನಗರ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಹಲವರು ಕರೆ ನೀಡಿದ್ದಾರೆ.
2024ರ ಬೆಂಗಳೂರಿನ ಹಲವು ಭಾಗಗಳು 1971ರ ಜಕಾರ್ತಾಕ್ಕಿಂತ ಕೆಟ್ಟದಾಗಿ ಕಾಣುತ್ತದೆ ಎಂದು ಹೇಳಲು ನನಗೆ ಬೇಸರವಾಗುತ್ತಿದೆ ಎಂದು ಬೆಂಗಳೂರಿನ ನಿವಾಸಿಯೊಬ್ಬರು ಅಭಿಪ್ರಾಯ ಹೇಳಿದ್ದಾರೆ. ನಮಗೆ ಬೆಂಗಳೂರಿನಲ್ಲಿ ಉತ್ತಮ ನೀತಿ ಮತ್ತು ನಿರ್ವಹಣೆಯ ಕೊರತೆ ಇದೆ. ನಮ್ಮ ನಗರಗಳು ಉತ್ತಮವಾಗಿರಬೇಕು ಮತ್ತು ಸಂಚಾರ ತಡೆರಹಿತವಾಗಿರಬೇಕು ಎನ್ನುವ ಉದ್ದೇಶವೇ ಇಲ್ಲ ಎಂದು ಚರ್ಚಿಸಿದ್ದಾರೆ.












Click it and Unblock the Notifications