ಬೆಂಗಳೂರು ಮಳೆ ಅವಾಂತರ: ಚರ್ಚ್ ಸ್ಟ್ರೀಟ್‌ನ ಪುಸ್ತಕ ಮಳಿಗೆ ಜಲಾವೃತ, ಮಳೆನೀರಿನಲ್ಲಿ ತೇಲಿದ 5000ಕ್ಕೂ ಹೆಚ್ಚು ಪುಸ್ತಕಗಳು
ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸುರಿದ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯು ನಗರದಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಈ ಅಕಾಲಿಕ ಮಳೆಯ ಅಬ್ಬರಕ್ಕೆ ಬೆಂಗಳೂರಿನ ಪುಸ್ತಕ ಪ್ರೇಮಿಗಳ ನೆಚ್ಚಿನ ತಾಣವಾದ ಚರ್ಚ್ ಸ್ಟ್ರೀಟ್‌ನಲ್ಲಿರುವ 'ದಿ ಬುಕ್‌ವರ್ಮ್' (The Bookworm) ಪುಸ್ತಕ ಮಳಿಗೆಗೆ ಮಳೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮಳಿಗೆಯೊಳಗೆ ನೀರು ನಿಂತು ಸಾವಿರಾರು ಪುಸ್ತಕಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ಸಾಹಿತ್ಯ ಪ್ರಿಯರಿಗೆ ನೋವನ್ನುಂಟು ಮಾಡುತ್ತಿವೆ.
'ದಿ ಬುಕ್‌ವರ್ಮ್' ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮಳಿಗೆಯೊಳಗೆ ಮಳೆ ನೀರು ನುಗ್ಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, "ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಾವು ಸುಮಾರು 4000 ದಿಂದ 5000 ಪುಸ್ತಕಗಳನ್ನು ಕಳೆದುಕೊಂಡಿದ್ದೇವೆ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಹಂಚಿಕೊಂಡಿರುವ ಮೊದಲ ಚಿತ್ರದಲ್ಲಿ ಮಳಿಗೆಯ ಹೊರಭಾಗ ಸಂಪೂರ್ಣವಾಗಿ ಆಲಿಕಲ್ಲುಗಳಿಂದ ಆವೃತವಾಗಿರುವುದು ಕಂಡುಬಂದರೆ, ಉಳಿದ ಚಿತ್ರಗಳಲ್ಲಿ ಮಳಿಗೆಯೊಳಗೆ ಮಳೆನೀರು ತುಂಬಿ ಪುಸ್ತಕಗಳು ಮುಳುಗಿರುವುದು ಹಾಗೂ ನೀರಿನಲ್ಲಿ ತೇಲುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಪುಸ್ತಕ ಪ್ರೇಮಿಗಳಿಂದ ಬೆಂಬಲ ವ್ಯಕ್ತ
ಈ ಫೋಟೋಗಳನ್ನು ನೋಡಿದ ಸಾಮಾಜಿಕ ಜಾಲತಾಣದ ಬಳಕೆದಾರರು ಹಾಗೂ ಓದುಗರು ಕೇವಲ ಬೇಸರ ವ್ಯಕ್ತಪಡಿಸದೆ, ಮಳಿಗೆಯ ನೆರವಿಗೆ ಧಾವಿಸಿದ್ದಾರೆ. ಇತರ ಓದುಗರಿಗೂ ಸಹಾಯ ಮಾಡಲು ಅವರು ಆನ್‌ಲೈನ್‌ನಲ್ಲಿ ಅಭಿಯಾನ ಶುರು ಮಾಡಿದ್ದಾರೆ. ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, "ಕಳೆದ ವರ್ಷ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್‌ನಲ್ಲೂ ಇದೇ ರೀತಿ ಆಗಿತ್ತು. ಆಗ ಅವರು 'ವೆಟ್ ಬುಕ್ ಫೇರ್' (ಒದ್ದೆಯಾದ ಪುಸ್ತಕಗಳ ಮೇಳ) ಆಯೋಜಿಸಿದ್ದರು, ಸಾಕಷ್ಟು ಜನರು ಬಂದು ಬೆಂಬಲ ನೀಡಿದರು. ಈ ನಿಟ್ಟಿನಲ್ಲಿ ನಾವು ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಸಿ" ಎಂದಿದ್ದಾರೆ.
ಮತ್ತೊಬ್ಬ ಓದುಗರು, "ನೀವೆಲ್ಲರೂ ಹಾನಿಗೊಳಗಾದ ಒಂದೊಂದು ಪುಸ್ತಕವನ್ನು ಖರೀದಿಸಿದರೆ, ಮಳಿಗೆಯು ಈ ನಷ್ಟದಿಂದ ಸುಲಭವಾಗಿ ಚೇತರಿಸಿಕೊಳ್ಳಬಹುದು. ಒದ್ದೆಯಾದ ಪುಸ್ತಕಗಳು ಸಹ ಜ್ಞಾನವನ್ನೇ ನೀಡುತ್ತವೆ. ದಯವಿಟ್ಟು ಈ ಮಳಿಗೆಗೆ ಸಹಾಯ ಮಾಡಿ" ಎಂದು ಮನವಿ ಮಾಡಿದ್ದಾರೆ. ಅನೇಕರು ಈ ಕಷ್ಟದ ಸಮಯದಲ್ಲಿ ತಾವು ಸಾಧ್ಯವಾದಷ್ಟು ಪುಸ್ತಕಗಳನ್ನು ಖರೀದಿಸುವ ಮೂಲಕ ಮಳಿಗೆಯ ಬೆಂಬಲಕ್ಕೆ ನಿಲ್ಲುವ ಭರವಸೆ ನೀಡಿದ್ದಾರೆ.
ಹಾನಿಗೊಳಗಾದ ಪುಸ್ತಕಗಳ ಮುಂದಿನ ಗತಿ ಏನು?
ಈ ಘಟನೆಯ ಕುರಿತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯೊಂದಿಗೆ ಮಾತನಾಡಿರುವ ಮಳಿಗೆಯ ಮಾಲೀಕ ಕೃಷ್ಣ ಅವರು, "ಬೇಸಿಗೆ ರಜೆಯ ಕಾರಣ ವ್ಯಾಪಾರ ಹೆಚ್ಚಾಗುವ ನಿರೀಕ್ಷೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ನಾವು ಹೆಚ್ಚಿನ ಸ್ಟಾಕ್ ತರಿಸಿದ್ದೆವು. ಆದರೆ ಈಗ ಸಾವಿರಾರು ಪುಸ್ತಕಗಳು ಹಾನಿಗೀಡಾಗಿವೆ" ಎಂದು ಅಳಲು ತೋಡಿಕೊಂಡಿದ್ದಾರೆ.
ನೀರು ತಾಗಿರುವ ಕೆಲವು ಪುಸ್ತಕಗಳನ್ನು ಬಿಸಿಲಿನಲ್ಲಿ ಒಣಗಿಸಿ, ನಂತರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಮಳಿಗೆ ನಿರ್ಧರಿಸಿದೆ. ಆದರೆ, ತೀವ್ರವಾಗಿ ಹಾನಿಗೊಳಗಾದ ಪುಸ್ತಕಗಳನ್ನು ಎಸೆಯುವುದು ಅನಿವಾರ್ಯವಾಗಿದೆ. "ಇತ್ತೀಚಿನ ದಿನಗಳಲ್ಲಿ ಪ್ರಕಾಶಕರು ಮರುಬಳಕೆಯ ಕಾಗದವನ್ನು (recycled paper) ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಅವುಗಳ ಗುಣಮಟ್ಟ ಕಡಿಮೆಯಿರುತ್ತದೆ ಮತ್ತು ನೀರಿನಲ್ಲಿ ಬೇಗನೆ ಕರಗುತ್ತವೆ. ಆಸ್ಟರಿಕ್ಸ್ ಮತ್ತು ಒಬೆಲಿಕ್ಸ್‌ನಂತಹ ಕಾಮಿಕ್ ಪುಸ್ತಕಗಳು ಆಯಿಲ್ ಪೇಪರ್‌ನಿಂದ ಮಾಡಲ್ಪಟ್ಟಿರುವುದರಿಂದ ಅವುಗಳನ್ನು ಉಳಿಸಲು ಸಾಧ್ಯವೇ ಇಲ್ಲ" ಎಂದು ಕೃಷ್ಣ ವಿವರಿಸಿದ್ದಾರೆ.












Click it and Unblock the Notifications