Bengaluru Rain: ಬ್ರ್ಯಾಂಡ್ ಬೆಂಗಳೂರು ಅಲ್ಲ ಬೋಟ್ ಬೆಂಗಳೂರು: ಕರೆಯಾಗಿ ಬದಲಾದ ನಾಯಂಡಹಳ್ಳಿ ಸರ್ಕಲ್ ಇಲ್ಲಿದೆ ವೈರಲ್ ವಿಡಿಯೋ
Bengaluru Rain: ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಒಂದೇ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ಕಳೆದ ಎರಡೂವರೆ ತಿಂಗಳಿನಿಂದಲೂ ಬೆಂಗಳೂರಿನಲ್ಲಿ ಭಾರೀ ಒಣಹವೆ - ಬಿಸಿಲು ಇತ್ತು. ಕಳೆದ ಎರಡು ದಿನಗಳಿಂದಲೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಬುಧವಾರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿದ್ದು, ನಾಯಂಡಹಳ್ಳಿ ಪ್ರದೇಶ ಹಾಗೂ ನಾಯಂಡಹಳ್ಳಿಯ ಸರ್ಕಲ್ ಕೆರೆಯಂತೆ ಆಗಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ನಗರದಲ್ಲಿ ಬುಧವಾರ ಒಂದೇ ದಿನ ಸುರಿದ ಮಳೆಗೆ ಬೆಂಗಳೂರಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹರ್ಷತ್ ಕೆ.ಬಿ ಎನ್ನುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾಯಂಡಹಳ್ಳಿಯ ಪ್ರದೇಶವು ಮಳೆಯಿಂದ ಜಲಾವೃತವಾಗಿದ್ದು, ಆಟೋಗಳು ಮುಳುಗಿರುವುದು ವೈರಲ್ ವಿಡಿಯೋದಲ್ಲಿದೆ. ನಾನಂತೂ ಬಸ್‌ನಲ್ಲಿದ್ದೇನೆ. ಆಟೋಗಳು ಜಲಾವೃತವಾಗಿವೆ ಅಂತ ಹರ್ಷತ್ ಅವರು ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಬದಲು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

Bengaluru Rain: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಜನರ ಛೀಮಾರಿ
ಸಮುದ್ಯತಾ ಕಂಜರ್ಪಣೆ ಎನ್ನುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದವರಿಗೆ ಈ ರೋಡು, ಡ್ರೈನೇಜು, ರಸ್ತೆ ಹಳ್ಳ ರಿಪೇರಿ, ಮರಗಳ ದುರ್ಬಲ ಕೊಂಬೆ ಕಡಿಯೋದು ಇಂಥ ಕೆಲಸ ಎಲ್ಲ ಫೆಬ್ರವರಿ ಮಾರ್ಚ್ ಹೊತ್ತಿಗೆ ನೆನಪಾಗೋದೇ ಇಲ್ಲ ಅಲ್ವ? ಮಾರ್ಚ್ ಕೊನೆಗೆ ಶುರು ಮಾಡ್ತೀರಿ. ಎಪ್ರಿಲ್‌ನಲ್ಲಿ ಎಲ್ಲಾ ರಸ್ತೆ ಅಗಿತೀರಿ. ಕೊನೆಗೆ ಮಳೆ ಬಂತು ಅಂತ ಕೆಲಸ ನಿಲ್ಲಿಸ್ತೀರಿ. ಮತ್ತೆ ಹೊಸ ಟೆಂಡರ್, ಹೊಸ ಲೆಕ್ಕ. ಸಾಮಾನ್ಯ ಜನಗಳಿಗೂ ಮಳೆ ಯಾವಾಗ ಶುರುವಾಗತ್ತೆ ಅನ್ನೋ ಐಡಿಯಾ ಇರತ್ತೆ. ನಿಮಗೆ ಗೊತ್ತಿರಲ್ವ? ನಿಮ್ಮ ಅವಾಂತರಗಳಿಗೆ ಜನ ಒದ್ದಾಡಬೇಕು. ಪ್ರಾಧಿಕಾರಗಳಿಗೆ ಮಾತಿಗೆ ಮುಂಚೆ ಹೆಸರು ಬದಲಾಯಿಸಿದರೆ ಸಾಲದು. ಕೆಲಸ ಸರಿಹೋಗಬೇಕು. ಒಂದೇ ಮಳೆಗೆ ನದಿಯಾಗೋಗಿದೆ ಬೆಂಗಳೂರು. ಗ್ರೇಟ್ ಗ್ರೇಟರ್ ಸಾಧನೆ ನಿಮ್ದು..
ಇನ್ನು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಹ ಬೆಂಗಳೂರಿನ ಈ ಪರಿಸ್ಥಿತಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕೆ ಮಾಡಿವೆ. ಜೆಡಿಎಸ್ ಪಕ್ಷವು ಬೆಂಗಳೂರಿಗರು ಟ್ಯಾಕ್ಸ್ ಮಾತ್ರ ಕಟ್ಟಬೇಕು. ಆದರೆ, ಸವಲತ್ತು ಮಾತ್ರ ಕೇಳ್ಬೇಡಿ ! ನಗರದಲ್ಲಿ ಕೇವಲ ಎರಡು ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಜನಸಾಮಾನ್ಯರಿಗೆ ನರಕ ದರ್ಶನವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಬೆಂಗಳೂರಿನ ಮಾನ ಹರಾಜಾಗಿದೆ. ಬರೀ ಬಾಯಿ ಮಾತಿನಲ್ಲೇ ಸಿಂಗಾಪೂರ್ ತೋರಿಸುತ್ತಿರುವ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ರಾಜಧಾನಿಯ ಅಭಿವೃದ್ಧಿಗೆ ಅಕ್ಷರಶಃ ಗ್ರಹಣ ಹಿಡಿಸಿದ್ದಾರೆ ಎಂದು ದೂರಿದೆ.
ಜೆಡಿಎಸ್‌ನಿಂದಲೂ ಟೀಕೆ
ಡಿಸಿಎಂ ಡಿಕೆಶಿಯವರ 'ಬ್ರಾಂಡ್ ಬೆಂಗಳೂರು' ಎಂಬುದು ಬರಿ ಬಣ್ಣದ ಮಾತಾಯ್ತು, ಜನರ ಪಾಲಿಗೆ 'ಬ್ಯಾಡ್ ಬೆಂಗಳೂರು' ಬೆನ್ನೆತ್ತಿದೆ! ಮಳೆ ಬಂದರೆ ಸಾಕು ಬೆಂಗಳೂರಿನ ನಾಗರಿಕರಿಗೆ ನರಕ ಸದೃಶ. ಬಿಬಿಎಂಪಿಯನ್ನು GBA ಹೆಸರಲ್ಲಿ ಐದು ಪಾಲಿಕೆಗಳಾಗಿ ವಿಭಾಗಿಸಿ ಏನು ಪ್ರಯೋಜನಾ ? ಬೆಂಗಳೂರು ನಗರದಾದ್ಯಂತ ಇಂದು ಮಳೆ ಅನಾಹುತದಿಂದ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ನೀರು ನಿಂತು ಕರೆಯಂತಾಗಿರುವ ಟ್ರಾಫಿಕ್ ಜಾಮ್'ನಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಮಳೆಹಾನಿ ಸಮಸ್ಯೆಗಳ ಪರಿಹಾರಕ್ಕೆ ಕರೆ ಮಾಡಿದರೆ ತುರ್ತು ಕರೆಗಳನ್ನು ಸ್ವೀಕರಿಸುವವರೇ ಇಲ್ಲ. ಸಹಾಯವಾಣಿಯು ಕೆಲಸಕ್ಕೆ ಬರುತ್ತಿಲ್ಲ, ಕಾಲ್ ಕೂಡ ಕನೆಕ್ಟ್ ಆಗುತ್ತಿಲ್ಲ. ತೆರಿಗೆ ಮೇಲೆ ತೆರಿಗೆ ಹಾಕಿ, ದರ ಏರಿಕೆ ಮಾಡಿ ವಸೂಲಿ ಮಾಡುವ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಬೆಂಗಳೂರಿಗರ ಸಂಕಷ್ಟಗಳಿಗೆ ಸ್ಪಂದಿಸದ ಉಸ್ತವಾರಿ ಸಚಿವ ಡಿ.ಕೆ ಶಿವಕುಮಾರ್ ಅವರೇ, ಯಾವ ಪುರುಷಾರ್ಥಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಿದ್ದು, 'ಯೋಜನೆಗಳು' ಕೇವಲ ಕಾಗದದ ಮೇಲಿದೆಯೇ? ಇದುವೇನಾ ನಿಮ್ಮ ಬ್ರಾಂಡ್ ಬೆಂಗಳೂರು ಎಂದೂ ಜೆಡಿಎಸ್ ಪ್ರಶ್ನೆ ಮಾಡಿದೆ.












Click it and Unblock the Notifications