ಬೆಂಗಳೂರಿಗರಿಗೆ ಸಿಹಿಸುದ್ದಿ: ಜನರ ಮನವಿಗೆ ಸ್ಪಂದಿಸಿದ ಸರ್ಕಾರ ಪಾರ್ಕ್‌ಗಳ ಸಮಯ ವಿಸ್ತರಣೆ
ಬೆಂಗಳೂರು, ಜೂನ್. 11: ಬೆಂಗಳೂರಿನ ಎಲ್ಲಾ ಉದ್ಯಾನವನಗಳು ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತವೆ ಎಂದು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಜೂನ್ 11 ರಂದು ಘೋಷಿಸಿದ್ದಾರೆ.
ಜನದಟ್ಟಣೆಯಿಂದ ಕೂಡಿರುವ ಟೆಕ್ ಹಬ್‌ನಲ್ಲಿರುವ 1,200 ಸಾರ್ವಜನಿಕ ಉದ್ಯಾನವನಗಳು ಇನ್ನು ಮುಂದೆ ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ. ಈ ಮೊದಲು, ಉದ್ಯಾನವನಗಳು ಪ್ರತಿದಿನ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತಿದ್ದವು. ನಿರ್ವಹಣೆ ಕಾರ್ಯವನ್ನು ಕೈಗೊಳ್ಳುವಾಗ ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಮುಚ್ಚಿರುತ್ತಿದ್ದವು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಕೆ ಶಿವಕುಮಾರ್, "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಿಸುವ ಎಲ್ಲಾ ಉದ್ಯಾನವನಗಳು ಬೆಳಗ್ಗೆ 5 ರಿಂದ ರಾತ್ರಿ 10 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತವೆ. ಈ ಹಿಂದೆ, ಸಮಯವು ಬೆಳಗ್ಗೆ 5 ರಿಂದ 10 ರವರೆಗೆ ಇತ್ತು. ನಂತರ ಮಧ್ಯಾಹ್ನ 1:30 ರಿಂದ ರಾತ್ರಿ 8 ಗಂಟೆಗೆ ಇತ್ತು. ಎಲ್ಲಾ ಜವಾಬ್ದಾರಿಯುತ ನಾಗರಿಕರು ನಮ್ಮ ಉದ್ಯಾನವನಗಳನ್ನು ಅಡ್ಡುಕಟ್ಟಾಗಿ ಇಟ್ಟುಕೊಳ್ಳಲು ಬಿಬಿಎಂಪಿಯೊಂದಿಗೆ ಸಹಕರಿಸಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
ಎಲ್ಲಾ ಪಾರ್ಕ್‌ಗಳು ಬಿಬಿಎಂಪಿ ಅಡಿಯಲ್ಲಿ ಬಂದರೂ ಕೂಡ, ನಗರದ ಎರಡು ದೊಡ್ಡ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ರಾಜ್ಯ ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಬರುತ್ತವೆ. ಹೀಗಾಗಿ ಎರಡು ಕಡೆ ಅದರದ್ದೇ ಆದ ಪ್ರತ್ಯೇಕ ಸಮಯವನ್ನು ಹೊಂದಿವೆ.

"ಬೆಂಗಳೂರು 1200 ಕ್ಕೂ ಹೆಚ್ಚು ಉದ್ಯಾನವನಗಳನ್ನು ಹೊಂದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಉದ್ಯಾನವನಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿಯೂ ಉದ್ಯಾನವನವಿದೆ. ನಾಗರಿಕರು ಈ ಸ್ಥಳಗಳನ್ನು ವಾಕಿಂಗ್, ಜಾಗಿಂಗ್, ವ್ಯಾಯಾಮ, ಸಾಮಾಜಿಕವಾಗಿ ಮತ್ತು ಮುಖ್ಯವಾಗಿ ಆಶ್ರಯಕ್ಕಾಗಿ ಬಳಸುತ್ತಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಹೊರಾಂಗಣ ಕೆಲಸಗಾರರಿಗೆ ದಿನವಿಡೀ ಉದ್ಯಾನವನಗಳನ್ನು ತೆರೆದಿಡಲು ಸಾರ್ವಜನಿಕ ಬೇಡಿಕೆಯಿದೆ" ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ದಿನವಿಡೀ ಎಲ್ಲಾ ಉದ್ಯಾನವನಗಳನ್ನು ತೆರೆಯುವಂತೆ ನಾಗರಿಕ ಗುಂಪುಗಳು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿವೆ. ನಿರ್ವಹಣೆಯ ಕಾರಣಗಳನ್ನು ಉಲ್ಲೇಖಿಸಿ, ಉದ್ಯಾನವನಗಳನ್ನು ಮಧ್ಯಾಹ್ನದ ಸಮಯದಲ್ಲಿ (10 am-1:30 pm) ಮುಚ್ಚಲಾಯಿತು. ಆದರೆ, ಬೇಸಿಗೆಯ ತಿಂಗಳುಗಳಲ್ಲಿ ಈ ಹಸಿರು ಉದ್ಯಾನವನಗಳು ಸಾರ್ವಜನಿಕ ವಿಶ್ರಾಂತಿಗಾಗಿ ಪ್ರಮುಖವಾಗಿವೆ ಎಂದು ನಾಗರಿಕ ಗುಂಪುಗಳು ಮತ್ತು ಸಂಘಟನೆಗಳು ಮನವಿ ಮಾಡಿವೆ.
"ಕಳೆದ ವರ್ಷ ಬಿಬಿಎಂಪಿ 1 ಲಕ್ಷ ಸಸಿಗಳನ್ನು ನೆಟ್ಟು 50 ಸಾವಿರ ಸಾರ್ವಜನಿಕರಿಗೆ ವಿತರಿಸಿತ್ತು. 250 ಶಾಲೆಗಳು ಮತ್ತು ಅವರ ವಿದ್ಯಾರ್ಥಿಗಳು 52,000 ಸಸಿಗಳನ್ನು ನೆಟ್ಟರು. ಮಕ್ಕಳು ತಮ್ಮ ಸಸ್ಯದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷ ಹೆಚ್ಚು ಶಾಲೆಗಳು ಮತ್ತು ಮಕ್ಕಳನ್ನು ಒಳಗೊಂಡಂತೆ 2 ಲಕ್ಷ ಸಸಿಗಳನ್ನು ನೆಡಲು ಯೋಜಿಸಿದ್ದೇವೆ. 250 ಶಾಲೆಗಳು ಈಗಾಗಲೇ ಒಪ್ಪಿಗೆ ನೀಡಿದ್ದು, 75,000 ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಉಳಿದವುಗಳನ್ನು ಪೊಲೀಸರು ಮತ್ತು ಸಾರ್ವಜನಿಕರ ನೆರವಿನೊಂದಿಗೆ ಮಾಡಲಾಗಿದೆ. 25,000 ಸಸಿಗಳನ್ನು ವಿತರಿಸಲಾಗಿದ್ದು, ಇನ್ನೂ 25,000 ಸಸಿಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು" ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.












Click it and Unblock the Notifications