Bengaluru: ರಸ್ತೆಯಲ್ಲಿ ರೋಷಾವೇಶ ತೋರಿಸುವವರ ವಿರುದ್ಧ ರೌಡಿ ಶೀಟ್ ಪಕ್ಕಾ: ಬೆಂಗಳೂರು ಪೊಲೀಸರ ಖಡಕ್ ಸಂದೇಶ
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ರಸ್ತೆಯಲ್ಲಿ ರೋಷಾವೇಶ ( ರೋಡ್ ರೇಜ್ ) ತೋರಿಸುವವರ ವಿರುದ್ಧ ರೌಡಿ ಶೀಟ್ ತೆರೆಯಲಾಗುವುದು ಎಂದು ಪೊಲೀಸರು ಖಡಕ್ ಸಂದೇಶ ರವಾನಿಸಿದ್ದಾರೆ.
ಈಗಾಗಲೇ ರೋಡ್ ರೇಜ್ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಪೊಲೀಸರು ರೌಡಿ ಶೀಟ್ ತೆರೆದಿದ್ದಾರೆ. ಕಳೆದ ತಿಂಗಳು ವೈಟ್‌ಫೀಲ್ಡ್ ಪ್ರದೇಶದಲ್ಲಿ ರೋಡ್ ರೇಜ್‌ಗೆ ಸಂಬಂಧಿಸಿದ ಅನೇಕ ಪ್ರಕರಣಗಳು ವರದಿಯಾಗಿವೆ.

ರೋಡ್ ರೇಜ್ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ದೂರುಗಳ ಆಧಾರದ ಮೇಲೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರದ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ, 'ರಸ್ತೆ ರೋಷಾವೇಶ ತೋರಿಸುವುದು ರೌಡಿಗಳ ಕೃತ್ಯವಾಗಿದೆ. ಇದು ಜನಸಾಮಾನ್ಯರಲ್ಲಿ ಭಯ ಹುಟ್ಟಿಸುತ್ತದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಯಾಗುತ್ತದೆ. ಇದು ನಾಗರಿಕ ಸಮುದಾಯದಲ್ಲಿ ಎಂದಿಗೂ ಸ್ವೀಕಾರಾರ್ಹವಲ್ಲ' ಎಂದು ಹೇಳಿದ್ದಾರೆ.
ರೌಡಿ ಶೀಟ್ ತೆರೆಯುವಂತಹ ಕ್ರಮದಿಂದ ಕಾನೂನು ಸುವ್ಯವಸ್ಥೆ ಸುಧಾರಿಸಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್ ಡಿ ಶರಣಪ್ಪ ಅಭಿಪ್ರಾಯ ಪಟ್ಟಿದ್ದಾರೆ.

'ಪ್ರಕರಣದ ತೀವ್ರತೆ ಮತ್ತು ಹಾನಿಯ ಆಧಾರದ ಮೇಲೆ ರೌಡಿ ಶೀಟ್ ತೆರೆಯಲಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಘಟನೆಯ ಸಂದರ್ಭದಲ್ಲಿ ಕಂಡುಬಂದ ಬೆದರಿಕೆಯ ಪ್ರಮಾಣವು ಚಾರ್ಜ್ ಶೀಟ್ ತೆರೆಯಲು ಆಧಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಸ್ತೆಯಲ್ಲಿ ರೋಷಾವೇಶ ಅಥವಾ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿರುವ ನಿರ್ಲಜ್ಜ ವ್ಯಕ್ತಿಗಳ ಮೇಲೆ 'ರೌಡಿ ಶೀಟ್' ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಪ್ರತಿಕ್ರಿಯಿಸಿದರು.
ರಸ್ತೆಯಲ್ಲಿ ರೋಷಾವೇಶ ತೋರಿಸುವುದು, ಆಕ್ರಮಣ ಮಾಡುವುದು ಮತ್ತು ಸಂವೇದನಾರಹಿತ ನಡವಳಿಕೆಯನ್ನು ವ್ಯಕ್ತಪಡಿಸುವುದು ರೌಡಿ ವರ್ತನೆಗೆ ಸಮನಾಗಿರುತ್ತದೆ. ವೈಯಕ್ತಿಕ ಲಾಭಕ್ಕಾಗಿ ರಸ್ತೆ ಬಳಕೆದಾರರನ್ನು ಬೆದರಿಸುವುದು ಮತ್ತು ಕಿರುಕುಳ ನೀಡುವುದರ ಕುರಿತು ನಾವು ಗಂಭೀರವಾಗಿದ್ದೇವೆ' ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ವರದಿಯಾದ ಇಂತಹ ಉದ್ದೇಶಪೂರ್ವಕ ರಸ್ತೆ ರೋಷಾವೇಶ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕೆಲವು ರೌಡಿ ಶೀಟ್‌ಗಳನ್ನು ತೆರೆದಿದ್ದಾರೆ. ನಾವು ಕರ್ನಾಟಕ ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಪಿಗಳು ಹೆಚ್ಚಾಗಿ ಸ್ಥಳೀಯ ಪ್ರದೇಶಗಳಿಂದ ಬಂದ ಗೂಂಡಾಗಳಾಗಿರುತ್ತಾರೆ. ಅಪಘಾತದಂತಹ ಘಟನೆಯನ್ನು ಸೃಷ್ಟಿಸಿ ಹಣ ವಸೂಲಿ ಮಾಡಲು ಕಾರುಗಳ ಮಾಲೀಕರನ್ನು ಬೆದರಿಸುತ್ತಾರೆ. ಅವರಲ್ಲಿ ಕೆಲವರು ಬೆದರಿಸಿ ಹಣ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಘಟನೆಗಳು ವಿಶೇಷವಾಗಿ ಬೆಂಗಳೂರಿನ ಹೊರ ವಲಯಗಳಲ್ಲಿ ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications