Road Rage: ರಸ್ತೆಗಳಲ್ಲಿ ಗಲಾಟೆಯಾದ್ರೆ ಈ ಕೆಲಸ ಮಾಡಿ ಸಾಕು!
ಸಿಲಿಕಾನ್ ಸಿಟಿ ಬೆಂಗಳೂರು ಎಂದಾಕ್ಷಣ ʼಅಯ್ಯೋ ಟ್ರಾಫಿಕ್..ʼ ಅನ್ನೋ ಮಾತಂತೂ ಬಹುತೇಕರ ಬಾಯಲ್ಲಿ ಬರುತ್ತೆ. ಮತ್ತೊಂದೆಡೆ ದಟ್ಟಣೆಯ ಸಂಚಾರದ ವೇಳೆ ವಾಹನಗಳ ಅಪಘಾತ, ಗಲಾಟೆಗಳು ಕೂಡ ಸಾಮಾನ್ಯ. ನೋಡ ನೋಡುತ್ತಿದ್ದಂತೆಯೇ ಬೈಕ್ ಸವಾರರು ಹಾಗೂ ಕಾರು ಚಾಲಕರು ಯಾವುದೋ ಒಂದು ಸಣ್ಣ ಸಣ್ಣ ವಿಚಾರಕ್ಕೆಲ್ಲ ಬೀದೀಲೇ ಜಗಳಕ್ಕಿಳಿದು ದೊಡ್ಡ ರಾದ್ಧಾಂತವನ್ನೇ ಮಾಡ್ತಾರೆ..
ಇಂತಹ ಘಟನೆಗಳಿಂದ ಇತರರಿಗೆ ತೊಂದರೆ ಉಂಟಾಗಿ ಕೆಲವೆಡೆ ಟ್ರಾಫಿಕ್ ಕೂಡ ಹೆಚ್ಚಾಗುತ್ತದೆ. ಬಹುತೇಕರು ಗಡಿಬಿಡಿಯಲ್ಲೇ ಇರುವುದರಿಂದ ಈ ಜಗಳ ಬಿಡಿಸುವ ಗೋಜಿಗೂ ಹೋಗುವುದಿಲ್ಲ. ಕೊನೆಗೆ ಸಮೀಪದಲ್ಲೇ ಸಂಚಾರ ಪೊಲೀಸರು ಇದ್ದರೆ ಮಾತ್ರ ಇಂತಹ ಗಲಾಟೆಗಳನ್ನು ಬಿಡಿಸುತ್ತಾರೆ. ಇಲ್ಲದಿದ್ದರೆ ಕಥೆ ಮುಗೀತು...ಜಗಳ ನೋಡಿಕೊಂಡು ಸುಮ್ಮನಾಗುವವರೇ ಹೆಚ್ಚು.

ಇಂತಹ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಮತ್ತೊಂದು ಅವಕಾಶವನ್ನು ಸಾರ್ವಜನಿಕರಿಗೇ ನೀಡಿದ್ದಾರೆ. ರಸ್ತೆಗಳಲ್ಲಿ ಗಲಾಟೆಗಳು ನಡೆದರೆ, ನೀವು ಪೊಲೀಸ್ ಸ್ಟೇಷನ್‌ವರೆಗೂ ಹೋಗುವ ಅವಶ್ಯಕತೆಯೇ ಇಲ್ಲ. ಈ ಗಲಾಟೆ ನಡೆಯುವಾಗ ಜಸ್ಟ್ ಅದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೂ ಸಾಕು..ಮುಂದಿನ ಕಥೆ ನಾವೇ ನೋಡ್ತೋತೀವಿ ಅಂತಿದ್ದಾರೆ ಪೊಲೀಸರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಈ ರೀತಿಯ ರಸ್ತೆ ಗಲಾಟೆಗಳು ಹೆಚ್ಚಾಗುತ್ತಿರುವ ಕಾರಣ ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ರಸ್ತೆ ಜಗಳಗಳ ಬಗ್ಗೆ ಮಾತನಾಡಿರುವ ಅವರು, ರಸ್ತೆಗಳಲ್ಲಿ ಸಂಚರಿಸುವಾಗ ಸಣ್ಣಪುಟ್ಟ ವಿಚಾರಕ್ಕೆ ವಾಹನ ಮಾಲೀಕರ ನಡುವೆ ವಾಗ್ವಾದಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಅವರು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಇಂತಹ ಘಟನೆಗಳು ಆದಾಗ ಅನವಶ್ಯಕವಾಗಿ ಕೋಪಕ್ಕೆ ಒಳಗಾಗುವುದು ಬೇಡ. ಒಂದು ವೇಳೆ ಸಾರ್ವಜನಿಕರಿಗೆ ಇಂತಹ ಗಲಾಟೆಯಾಗುವ ಸಂದರ್ಭ ಎದುರಾದಾಗ ಮೊದಲಿಗೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ದೂರು ನೀಡಬಹುದು. ಪೊಲೀಸರು ಕೆಲವೇ ನಿಮಿಷಕ್ಕೆ ಸ್ಥಳಕ್ಕಾಗಮಿಸಿ, ಪರಿಸ್ಥಿತಿ ನಿಯಂತ್ರಿಸುತ್ತಾರೆ ಎಂದು ಹೇಳಿದ್ದಾರೆ.
ಗಾಡಿ ಓವರ್‌ಟೇಕ್, ಗಾಡಿ ಟಚ್ ಆಗುವ ವಿಚಾರವಾಗಿಯೇ ಹೆಚ್ಚು ಜಗಳಗಳು ನಡೆಯುತ್ತಿರುವುದು ವರದಿಯಾಗಿದೆ. ರಸ್ತೆಗಳನ್ನು ಉಪಯೋಗಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದು ಯಾರಿಗೋ ಒಬ್ಬರಿಗೆ ಸೀಮಿತವಾದದ್ದಲ್ಲ. ಆದರೆ, ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸಲೇಬೇಕು ಎಂದು ಸೂಚಿಸಿದ್ದಾರೆ.
ಸಾರ್ವಜನಿಕರು ಅಲ್ಲಿ ಏನು ಘಟನೆ ನಡೆದಿದೆ ಎಂಬುದರ ಕುರಿತಾಗಿ ಫೋಟೋ ಕ್ಲಿಕ್ಕಿಸಿ, ಅದನ್ನು ಪಬ್ಲಿಕ್ ಐ ಆಪ್‌ನಲ್ಲಿ ಪೋಸ್ಟ್ ಮಾಡಬಹುದು. ಅದನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಗಲಾಟೆ ಮಾಡುವಾಗ ತಪ್ಪದೇ ಅಂತಹ ವಾಹನಗಳ ನೋಂದಣಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ. ಪೊಲೀಸರಿಗೆ ಪಕ್ಕಾ ಮಾಹಿತಿ ಕೊಟ್ಟಾಗ ಕ್ರಮ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಘಟನೆಗಳ ವಿಡಿಯೋ ಪೋಸ್ಟ್ ಮಾಡುವ ಮುನ್ನ ಪೊಲೀಸರಿಗೆ ನೇರವಾಗಿ ಮಾಹಿತಿ ನೀಡಲು ಪ್ರಯತ್ನಿಸಿ, ಅದು ಸಾಧ್ಯವಾಗದಿದ್ದರೆ ನೇರವಾಗಿ ಪೋಸ್ಟ್ ಮಾಡಬಹುದು. ಆಗ ಮೊದಲಿಗೆ ಪೋಸ್ಟ್ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ, ಆ ನಂತರವೇ ಘಟನೆಯ ಬಗ್ಗೆ ಗಮನಹರಿಸುತ್ತಾರೆ ಎಂದು ಕಮೀಷನರ್ ದಯಾನಂದ್ ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಫೋಟೋ ವಿಡಿಯೋಗಳನ್ನು ಆಧರಿಸಿಯೇ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದು, ಸಾರ್ವಜನಿಕರಿಗೆ ಈ ವಿಚಾರವಾಗಿ ಮುಕ್ತ ಅವಕಾಶ ನೀಡಲಾಗಿದೆ.












Click it and Unblock the Notifications