Train Cancellation: ಬೆಂಗಳೂರು-ಮಂಗಳೂರು ಬಹುತೇಕ ರೈಲುಗಳ ಸಂಚಾರ ಡಿ.14 ರಿಂದ ರದ್ದು, ಎಷ್ಟು ದಿನ, ರೈಲು ಮಾಹಿತಿ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಮತ್ತು ಮಂಗಳೂರಿನ ಮಧ್ಯೆ ನಾಳೆಯಿಂದ (ಡಿ.14) ಐದು ದಿನಗಳ ಕಾಲ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮಾರ್ಗ ಮಧ್ಯೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ, ಎಲ್ಲೆಲ್ಲಿ ಏನು ಕಾಮಗಾರಿ ನಡೆಯಲಿದ್ದು, ರದ್ದಾ ರೈಲುಗಳ ಪಟ್ಟಿ, ಮಾಹಿತಿ ಇಲ್ಲಿ ತಿಳಿಯಬಹುದು.
ನಾಳೆ ಡಿಸೆಂಬರ್ 14 ರಿಂದ 18 ರ ತನಕ ಐದು ದಿನಗಳ ಕಾಲ ಬೆಂಗಳೂರು- ಮಂಗಳೂರು ನಡುವಿನ ಬಹುತೇಕ ರೈಲು ಸೇವೆ ರದ್ದಾಗಲಿದೆ. ಇವೆರಡು ನಗರಗಳ ಮಧ್ಯದ ಮಾರ್ಗದಲ್ಲಿ ಹಾಸನ ಜಂಕ್ಷನ್ ವ್ಯಾಪ್ತಿಯಲ್ಲಿ (ನಿಲ್ದಾಣ) ಸಿಗ್ನಲಿಂಗ್ ಕಾರ್ಯ ನಡೆಯಲಿದೆ. ಅಲ್ಲದೇ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ನವೀಕರಣ ಮಾಡಲಿದ್ದಾರೆ.

ಈ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಮುಂದಿನ ಐದು ದಿನಗಳ ಕಾಲ ಉದ್ಯಾನನಗರಿ ಬೆಂಗಳೂರು ಮತ್ತು ಕರಾವಳಿ ಭಾಗದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ಪ್ರಯಾಣಿಕರು ಎರಡು ಪ್ರಮುಖ ರೈಲುಗಳಾದ ಬೆಂಗಳೂರು- ಕಣ್ಣೂರು- ಬೆಂಗಳೂರು ಮತ್ತು ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ರಾತ್ರಿ ಹೊರಡುವ ರೈಲುಗಳು ರದ್ದಾಗಿವೆ. ಪ್ರಯಾಣಿಕರು ಇದನ್ನು ಗಮನಿಸಿ ಈ ನಗರಗಳತ್ತ ಸಂಚಾರ ಮಾಡಬೇಕಿದೆ.
ರದ್ದಾದ ರೈಲುಗಳ ಪಟ್ಟಿ
ಡಿಸೆಂಬರ್ 16 ರಿಂದ 20ರವರೆಗೆ ಬೆಂಗಳೂರು-ಕಣ್ಣೂರು ರೈಲು (ಗಾಡಿ ಸಂಖ್ಯೆ- 16511 ) ಹಾಗೂ ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ-16595) ರದ್ದುಗೊಂಡಿವೆ. ಇನ್ನೂ ಅಲ್ಲಿಂದ ಬೆಂಗಳೂರಿಗೆ ಬರುವ ಸಹ ವರ್ತಿ ರೈಲುಗಳಾದ 16512 ಸಂಖ್ಯೆಯ ರೈಲನ್ನು ಡಿಸೆಂಬರ್ 17ರಿಂದ ಐದು ದಿನ ರದ್ದು ಮಾಡಲಾಗಿದೆ.
ಯಶವಂತಪುರದಿಂದ ಮಂಗಳೂರು ಜಂಕ್ಷನ್ ಹೊರಡುವ ಗೋಮಟೇಶ್ವರ ಟ್ರೈ-ವೀಕ್ಲಿಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 16575) ಡಿಸೆಂಬರ್ 14, 17, 19 ಹಾಗೂ 21 ರಂದು ರದ್ದಾಗಿವೆ. ಅದರ ಜೋಡಿ ರೈಲನ್ನು (ಗಾಡಿ ಸಂಖ್ಯೆ 16576) ಡಿಸೆಂಬರ್ 15, 18, 20 ಮತ್ತು 22ರಂದು ರದ್ದು ಮಾಡಲಾಗಿದೆ ನೈರುತ್ಯ ರೈಲ್ವೆ ತಿಳಿಸಿದೆ.
ಯಶವಂತಪುರದಿಂದ ವಾರಕ್ಕೊಮ್ಮೆ ಓಡಾಡುತ್ತಿದ್ದ ರೈಲುಗಳ ಸಹ ರದ್ದಾಗಿವೆ. ಕಾರವಾರ-ಯಶವಂತಪುರ ರೈಲು (ಗಾಡಿ ಸಂಖ್ಯೆ) ನಾಳೆ ಡಿಸೆಂಬರ್ 14ರಿಂದ 16, 19, 21 ಮತ್ತು 23 ರವರೆಗೆ ರದ್ದು ಮಾಡಲಾಗಿದೆ. ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 16539/ 16540) ರೈಲನ್ನು ಡಿಸೆಂಬರ್ 16ರಿಂದ ಎರಡು ದಿನ ರದ್ದು ಮಾಡಲಾಗಿದೆ.
ರದ್ದಾಗಿರುವ ರೈಲುಗಳ ಪಟ್ಟಿ ನೋಡಿಕೊಂಡು ಪ್ರಯಾಣಿಕರು ಪರ್ಯಾಯ ಸಾರಿಗೆ ಅನುಸರಿಸಿ ತೆರಳಬೇಕಿದೆ. ಇನ್ನೂ ಇಂಟರ್‌ಲಾಕಿಂಗ್, ಸಿಗ್ನಲಿಂಗ್ ಆದ ಬಳಿಕ ಈ ಮಾರ್ಗದ ರೈಲು ಸೇವೆ ಪುನಾರಂಭಗೊಳ್ಳಲಿವೆ.












Click it and Unblock the Notifications