ಬೆಂಗಳೂರಿನಲ್ಲಿ ಹಿಂದಿಯೇತರ ಭಾಷಿಕ ಹೋರಾಟಗಾರರ ಸಮಾವೇಶ: ಕರವೇ!
ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೇ ಹಿಂದಿ ಭಾಷೆಗೆ ಕೇಂದ್ರ ಸರ್ಕಾರವು ಆದ್ಯತೆ ಕೊಡುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಭಾರೀ ಅಭಿಯಾನಗಳು ನಡೆದಿವೆ. ಇದರ ನಡುವೆಯೂ ಹಿಂದಿ ದಿವಸ ನಡೆದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದರ ನಡುವೆ ಎಲ್ಲಾ ಹಿಂದಿಯೇತರ ರಾಜ್ಯಗಳು ಈ ವಿಷಯದಲ್ಲಿ ಒಂದಾಗುತ್ತಿವೆ. ಇದಕ್ಕೆ ಕರವೇ ಸಾರಥ್ಯವಹಿಸುತ್ತಿದೆ.
ಹೌದು ದೇಶದಾದ್ಯಂತ ಹಿಂದಿಯೇತರ ಭಾಷೆಗಳಿಂದ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆ ದೇಶದಾದ್ಯಂತ ನಡೆದಿದೆ. ಈ ಹಿಂದಿ ದಿವಸ ಆಚರಣೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಸೇರಿದಂತೆ ದೇಶದ ಎಲ್ಲಾ ಭಾಷೆಗಳನ್ನು ಸಮಾನವಾಗಿ ಕಾಣಬೇಕು ಎನ್ನುವ ಆಗ್ರಹ ದೇಶದಲ್ಲಿ ಕೇಳಿ ಬರುತ್ತಿದೆ.

ಇದರ ನಡುವೆಯೇ ಈಚೆಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಹಿಂದಿ ದೇಶದ ವಿಜ್ಞಾನ, ತಂತ್ರಜ್ಞಾನ ಹಾಗೂ ಆಡಳಿತದ ಭಾಷೆಯಾಗಬೇಕು ಎಂದು ಹೇಳಿದ್ದರು. ಅಲ್ಲದೇ ಹಿಂದಿ ಹಾಗೂ ಭಾರತದ ಇನ್ನುಳಿದ ಭಾಷೆಗಳೊಂದಿಗೆ ಯಾವುದೇ ವೈಮನಸ್ಸು ಇಲ್ಲ ಎಂದೂ ಅವರು ಹೇಳಿದ್ದರು. ಆದರೆ ಹಿಂದಿ ಭಾಷೆಗೆ ಕೇಂದ್ರ ಸರ್ಕಾರವು ಪ್ರಾಧಾನ್ಯತೆ ಕೊಡುತ್ತಿರುವುದು ಪದೇ ಪದೇ ಚರ್ಚೆಯಾಗುತ್ತಲ್ಲೇ ಇದೆ. ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ್ರು.ಟಿ.ಎ ಅವರು, ಹಿಂದಿ ಹೇರಿಕೆ ವಿರುದ್ಧ ಸತತ ಅಭಿಯಾನಗಳನ್ನು ನಡೆಸುತ್ತ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಚಳವಳಿಯನ್ನು ಹಮ್ಮಿಕೊಳ್ಳಲಿದೆ. ಹಿಂದಿ ಹೇರಿಕೆಯಿಂದ ಬಾಧಿತರಾದ ದೇಶದ ಇನ್ನಿತರ ಭಾಷೆಗಳನ್ನು ಆಡುವ ಜನರನ್ನು ಒಗ್ಗೂಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಇದಕ್ಕಾಗಿ ಬೆಂಗಳೂರಿನಲ್ಲಿ ಹಿಂದಿಯೇತರ ಭಾಷಿಕ ಹೋರಾಟಗಾರರ ಸಮಾವೇಶವನ್ನು ಸದ್ಯದಲ್ಲೇ ಆಯೋಜಿಸಲಿದ್ದೇವೆ. ಒಕ್ಕೂಟ ಸರ್ಕಾರ ಹಿಂದಿಹೇರಿಕೆಯನ್ನು ಕೂಡಲೇ ನಿಲ್ಲಿಸದಿದ್ದರೆ ಈ ಚಳವಳಿ ಯಾವ ಸ್ವರೂಪಕ್ಕಾದರೂ ತಿರುಗಬಹುದು. ಈ ಎಚ್ಚರಿಕೆಯನ್ನು ನಾವು ನೀಡಬಯಸುತ್ತೇವೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ಪರಿಚ್ಛೇದ 8ರಲ್ಲಿ ಗುರುತಿಸಲಾಗಿರುವ ಎಲ್ಲ ಭಾಷೆಗಳನ್ನೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಬೇಕು. ಕೇವಲ ಹಿಂದಿ ಮತ್ತು ಇಂಗ್ಲಿಷ್ ನುಡಿಗಳಿಗೆ ನೀಡಿರುವ ಈ ಸ್ಥಾನಮಾನವನ್ನು ಕನ್ನಡವೂ ಸೇರಿದಂತೆ ದೇಶದ ಎಲ್ಲ ನುಡಿಗಳಿಗೂ ವಿಸ್ತರಿಸಬೇಕು. ಹಿಂದಿ ಭಾಷೆಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೂಡಲೇ ಕಿತ್ತುಹಾಕಬೇಕು. ಇದು ನಮ್ಮ ಅಂತಿಮ ಗುರಿ. ಇದು ಆಗುವವರೆಗೂ ನಮ್ಮ ಚಳವಳಿ ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications