Hebbal tunnel project: ಹೆಬ್ಬಾಳ ಬಳಿ 1,086 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ; ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ರಯೋಗ
ಬೆಂಗಳೂರು: ನಗರದ ಅತ್ಯಂತ ಜನದಟ್ಟಣೆಯ ಪ್ರದೇಶವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ಸವಾರರ ಹೈರಾಣಾಗಿಸುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮಹತ್ವದ ಹೆಜ್ಜೆ ಇಟ್ಟಿದೆ. ಸುಮಾರು 1,086 ಕೋಟಿ ರೂಪಾಯಿ ವೆಚ್ಚದ ಆರು ಪಥಗಳ 'ಶಾರ್ಟ್ ಟನಲ್' (ಸಣ್ಣ ಸುರಂಗ ರಸ್ತೆ) ನಿರ್ಮಾಣಕ್ಕಾಗಿ ಬಿಡಿಎ ಟೆಂಡರ್ ಆಹ್ವಾನಿಸಿದ್ದು, ನಾಲ್ಕು ಪ್ರಮುಖ ಕಂಪನಿಗಳು ಈ ರೇಸ್‌ನಲ್ಲಿವೆ.
ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ (DBL), ಮ್ಯಾಕ್ಸ್ ಇನ್ಫ್ರಾ (ಇಂಡಿಯಾ) ಲಿಮಿಟೆಡ್, ಸೆಮಿಂಡಿಯಾ ಪ್ರಾಜೆಕ್ಟ್ಸ್ ಮತ್ತು ರಿತ್ವಿಕ್ ಪ್ರಾಜೆಕ್ಟ್ಸ್ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಿಡ್ ಸಲ್ಲಿಸಿವೆ. ಈ ಸುರಂಗ ರಸ್ತೆಯು ಒಟ್ಟು 2.18 ಕಿ.ಮೀ ಉದ್ದವಿರಲಿದ್ದು, ಎಸ್ಟೀಮ್ ಮಾಲ್ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಯ ಬಳಿ ಪ್ರವೇಶ ಹಾಗೂ ನಿರ್ಗಮನ ರಾಂಪ್‌ಗಳನ್ನು ಹೊಂದಿರಲಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾದ 18 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ.

ಟನಲ್‌ಗೆ ವಿರೋಧ
ಈ ಸುರಂಗವನ್ನು 'ಕಟ್-ಅಂಡ್-ಕವರ್' ವಿಧಾನದಲ್ಲಿ ನಿರ್ಮಿಸಲಾಗುತ್ತಿದ್ದು, ಯಾವುದೇ ಬೃಹತ್ ಟನಲ್ ಬೋರಿಂಗ್ ಯಂತ್ರಗಳನ್ನು ಬಳಸಲಾಗುವುದಿಲ್ಲ. ಇದು ಹೆಬ್ಬಾಳ ಫ್ಲೈಓವರ್‌ನ ಕೆಳಭಾಗದಲ್ಲಿ ಹಾದುಹೋಗಲಿದೆ. ಯೋಜನೆಯು ಪ್ರಗತಿಯಲ್ಲಿದ್ದರೂ, ಕೆಲವು ಸಂಚಾರ ತಜ್ಞರು ಇದರ ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಣ್ಣ ಸುರಂಗವು ವಾಸ್ತವವಾಗಿ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ದೊಡ್ಡ ಪಾತ್ರ ವಹಿಸುವುದಿಲ್ಲ ಎನ್ನುತ್ತಿದ್ದಾರೆ.
ಈ ಹಿಂದೆ ರಾಜ್ಯ ಹಣಕಾಸು ಇಲಾಖೆಯು ಸಹ ಇಷ್ಟು ದೊಡ್ಡ ಮೊತ್ತದ ವೆಚ್ಚದಲ್ಲಿ ಸಣ್ಣ ಸುರಂಗದ ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು. ಇದೇ ಮಾರ್ಗದಲ್ಲಿ ಮೆಟ್ರೋ ಲೈನ್, ಉಪನಗರ ರೈಲ್ವೆ ಮತ್ತು 17 ಕಿ.ಮೀ ಉದ್ದದ ಬೃಹತ್ ಸುರಂಗ ರಸ್ತೆ ಕೂಡ ಪ್ರಸ್ತಾವನೆಯಲ್ಲಿರುವುದರಿಂದ ಕಾಮಗಾರಿ ನಿರ್ವಹಣೆ ಸವಾಲಿನಿಂದ ಕೂಡಿದೆ. ಸದ್ಯ ಬಿಡಿಎ ಅಧಿಕಾರಿಗಳು ಕಂಪನಿಗಳ ತಾಂತ್ರಿಕ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತಿದ್ದು, ಶೀಘ್ರದಲ್ಲೇ ಆರ್ಥಿಕ ಬಿಡ್‌ಗಳನ್ನು ತೆರೆಯುವ ಸಾಧ್ಯತೆಯಿದೆ.
ಸದ್ಯಕ್ಕೆ ಬೆಂಗಳೂರು ನಗರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ 2.18 ಕಿಮೀ ಉದ್ದದ ಆರು ಲೇನ್‌ಗಳ ಶಾರ್ಟ್ ಟನಲ್ ಯೋಜನೆಗೆ ನಾಲ್ಕು ಮೂಲಸೌಕರ್ಯ ಕಂಪನಿಗಳು ಟೆಂಡರ್ ಸಲ್ಲಿಸಿವೆ. ಯೋಜನೆಯ ಅಂದಾಜು ವೆಚ್ಚವನ್ನು ಬಿಡಿಎ ₹1,086 ಕೋಟಿ ಎಂದು ನಿಗದಿ ಮಾಡಿದೆ. ಕಳೆದ ವಾರ ಟೆಂಡರ್‌ಗಳನ್ನು ಕರೆಯಲಾಗಿದ್ದು, ಮೊದಲು ತಾಂತ್ರಿಕ ಅರ್ಹತೆ ಮತ್ತು ಅನುಭವ ಪರಿಶೀಲನೆ ನಡೆಸಲಾಗುತ್ತದೆ.
ನಂತರ ಆರ್ಥಿಕ ಟೆಂಡರ್‌ಗಳನ್ನು ತೆರೆಯುವ ಮೂಲಕ ಗುತ್ತಿಗೆ ನೀಡಲಾಗುತ್ತದೆ. ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ. ಈಗಾಗಲೇ ಹೊಸ ರಾಂಪ್ ಮೂಲಕ ಹೆಬ್ಬಾಳ ಬಳಿ ಫ್ಲೈಓವರ್ ಬಳಿ ಟ್ರಾಫಿಕ್ ತುಸು ಕಡಿಮೆಯಾಗಿರುವುದು ವಾಹನ ಸವಾರರಿಗೆ ನೆಮ್ಮದಿ ನೀಡಿದೆ.












Click it and Unblock the Notifications