ಬೆಂಗಳೂರಲ್ಲಿ ಮಕ್ಕಳು ರಸ್ತೆ ದಾಟುವಾಗ ಅಪಘಾತ ಹೆಚ್ಚಳ: ನಗರ ಡಿಸಿಯಿಂದ ಮಹತ್ವದ ಸೂಚನೆ!
ಬೆಂಗಳೂರಿನಲ್ಲಿ ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾಗುವ ಸಂಖ್ಯೆ ಹೆಚ್ಚಳವಾಗಿದೆ ಎನ್ನುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಅಲ್ಲದೇ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾದ ಬೆನ್ನಲ್ಲೇ ಟ್ರಾಫಿಕ್ ಜಾಮ್ ಸಮಸ್ಯೆ ಹಾಗೂ ವಾಹನಗಳ ಅಪಘಾತ ಸಂಖ್ಯೆಯೂ ಹೆಚ್ಚಳವಾಗಿದೆ. ಇದರಿಂದ ಶಾಲಾ - ಕಾಲೇಜು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಆಘಾತಕಾರಿ ಅಂಶವು ಇದೀಗ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಹತ್ವದ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶಾಲಾ ಮಕ್ಕಳು ರಸ್ತೆ ಅಪಘಾತಕ್ಕೆ ಗುರಿಯಾಗುತ್ತಿರುವುದು ಹೆಚ್ಚಳವಾಗಿದೆ. ರಸ್ತೆ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದ್ದು. ಈ ರೀತಿ ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವವರ ಪರವಾನಿಗೆ ರದ್ದುಗೊಳಿಸಿ ಎಂದು ಜಗದೀಶ್ ಅವರು ಹೇಳಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ವೀಲಿಂಗ್ ಮಾಡಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ ವಾಹನ ಪರವಾನಿಗೆಯನ್ನು ಖಾಯಂ ಆಗಿ ರದ್ದುಗೊಳಿಸಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ (ಆಗಸ್ಟ್ 22)ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ ಆಗುವ ಅಪಘಾತಗಳು ಹೆಚ್ಚಾಗಿದ್ದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ರಸ್ತೆ ಅಪಘಾತ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಮಕ್ಕಳು ರಸ್ತೆ ದಾಟುವಾಗ ಶಾಲೆಯ ಆಯಾಗಳೊಂದಿಗೆ ದಾಟುವುದು, ಶಾಲಾ ವಾಹನಗಳನ್ನು ಓಡಿಸುವ ಚಾಲಕರನ್ನು ಕಡ್ಡಾಯ ತಪಾಸಣೆ ಹಾಗೂ ವಾಹನದಲ್ಲಿ ಸೀಮಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯದಂತೆ ಶಾಲೆಗಳು ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಅಪಘಾತ ನಿಯಂತ್ರಿಸಲು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಬ್ಲಾಕ್ ಸ್ಪಾಟ್ (Black spots) ಸೂಚನಾ ಫಲಕಗಳನ್ನು ಅಳವಡಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಾರಂತ್ಯದಲ್ಲಿ ಹೆಬ್ಬಾಳ ಮೇಲ್ಸೇತುವೆ ಮತ್ತು ಕುಣಿಗಲ್ ರಸ್ತೆಗಳಲ್ಲಿ ಯುವಕರು ವೀಲಿಂಗ್ ಮಾಡುತ್ತಾ ಬೈಕ್‌ಗಳನ್ನು ಚಲಾಯಿಸುತ್ತಿರುತ್ತಾರೆ ಇದರಿಂದ ಸಾರ್ವಜನಿಕರಿಗೆ ಸಂಚಾರಿಸಲು ತೊಂದರೆ ಆಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಈ ರೀತಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಆರ್‌ಸಿ, ಲೈಸೆನ್ಸ್ ರದ್ದುಪಡಿಸುವಂತೆ ಸೂಚಿಸಿದ್ದಾರೆ.
ಅಪಘಾತ ಸಂಭವಿಸುವ ಸ್ಥಳಗಳಿಗೆ ತಕ್ಷಣದಲ್ಲಿ ಆಂಬುಲೆನ್ಸ್ ಸೇವೆ ಒದಗಿಸಲು ಜಿಪಿಎಸ್ ಮ್ಯಾಪಿಂಗ್ ಸ್ಥಳಗಳನ್ನು ಗುರುತಿಸಲು ಅಗತ್ಯ ರಸ್ತೆ ನಕ್ಷೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮುಂದಿನ ಸಭೆಯಲ್ಲಿ ತಿಂಗಳಲ್ಲಿ ಸಂಭವಿಸುವ ಒಟ್ಟು ಅಪಘಾತ ನಿಯಂತ್ರಣಕ್ಕೆ ಕ್ರಿಯಾಯೋಜನೆ ಹಾಗೂ ಕೈಗೊಂಡಿರುವ ಕ್ರಮಗಳು ಬಗ್ಗೆ ಮಾಹಿತಿಯನ್ನು ಪಿಪಿಟಿಯಲ್ಲಿ ನೀಡುವಂತೆ ಅಧಿಕಾರಿಗಳಿಗೆ ಟಾಸ್ಕ್ ಕೊಟ್ಟಿದ್ದಾರೆ.












Click it and Unblock the Notifications