Bengaluru Bandh; ದೇವನಹಳ್ಳಿ ಬಳಿ ಏರ್‌ಪೋರ್ಟ್ ಟ್ಯಾಕ್ಸಿಗೆ ಕಲ್ಲು
ಬೆಂಗಳೂರು, ಸೆಪ್ಟೆಂಬರ್ 11; ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಬೆಂಗಳೂರು ನಗರ ಬಂದ್‌ಗೆ ಕರೆ ನೀಡಿದೆ. ಆದರೆ ಕೆಲವು ಖಾಸಗಿ ವಾಹನಗಳು ಸಂಚಾರ ನಡೆಸುತ್ತಿವೆ. ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಆಟೋ, ಟ್ಯಾಕ್ಸಿ ಸೇವೆಯಲ್ಲಿ ಸೋಮವಾರ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.
ಸೋಮವಾರ ಮುಂಜಾನೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 72 ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಣೆ ಮಾಡಿವೆ. ಆದರೆ ಮುಂಜಾನೆ ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸುತ್ತಿವೆ.

ಪ್ರಯಾಣಿಕರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೂರು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇವುಗಳಲ್ಲಿ ಎರಡು ಊಬರ್ ಟ್ಯಾಕ್ಸಿ ಆಗಿದ್ದು, ಮತ್ತೊಂದು ಕೆಎಸ್‌ಟಿಡಿಸಿಯ ಟ್ಯಾಕ್ಸಿಯಾಗಿದೆ.
ಸೋಮವಾರ ಮುಂಜಾನೆ ದೇವನಹಳ್ಳಿ ಬಳಿ ಅನಾಮಿಕರು ಟ್ಯಾಕ್ಸಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಒಂದು ಟ್ಯಾಕ್ಸಿಯ ಮುಂಭಾಗದ ಗಾಜು ಒಡೆದಿದೆ, ಮತ್ತೊಂದು ಟ್ಯಾಕ್ಸಿಯ ಡ್ರೈವರ್ ಸೀಟಿನ ವಿಂಡೋ ಗ್ಲಾಸ್‌ಗೆ ಹಾನಿಯಾಗಿದೆ.
ವಾಹನ ತಡೆದು ಆಕ್ರೋಶ; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ನೆಲಮಂಗಲ ಮತ್ತು ಅತ್ತಿಬೆಲೆಯಲ್ಲಿ ಸಂಚಾರ ನಡೆಸುತ್ತಿದ್ದ ಟಿಟಿಗಳನ್ನು ತಡೆದು ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದ್ ಕರೆ ಹಿನ್ನಲೆಯಲ್ಲಿ ಚಾಲಕರಿಗೆ ತೊಂದರೆ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಓಡಿಸುತ್ತಿದ್ದ ಚಾಲಕನಿಗೆ ಸನ್ಮಾನ ಮಾಡಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಹಿನ್ನಲೆಯಲ್ಲಿ ಓಲಾ, ಊಬರ್ ಟ್ಯಾಕ್ಸಿಗಳ ಸಂಚಾರ ಕಡಿಮೆ ಆಗಿದೆ. ವಿಮಾನ ನಿಲ್ದಾಣಕ್ಕೆ ಮಾತ್ರ ಟ್ಯಾಕ್ಸಿಗಳು ಸಿಗುತ್ತಿವೆ. ಆದರೆ ನಗರದೊಳಗೆ ಸಂಚಾರ ನಡೆಸಲು ಬುಕ್ಕಿಂಗ್ ಆಗುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.
ನಗರದೊಳಗೆ ಸಂಚಾರ ನಡೆಸಲು ಆಟೋಗಳು ಸಹ ಬುಕ್ ಆಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಮೆಜೆಸ್ಟಿಕ್‌ಗೆ ಮುಂಜಾನೆ ಬಂದಿಳಿದ ಪ್ರಯಾಣಿಕರು ಸಂಚಾರ ನಡೆಸಲು ಬಿಎಂಟಿಸಿ ಬಸ್ ಅವಲಂಬಿಸುವುದು ಅನಿವಾರ್ಯವಾಗಿದೆ. ನಗರದ ಒಳಭಾಗದ ಕೆಲವು ಪ್ರದೇಶಗಳಲ್ಲಿ ಆಟೋಗಳ ಸಂಚಾರವಿಲ್ಲ.
ಬಂದ್ ಹಿನ್ನಲೆಯಲ್ಲಿ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಬೆಳಗ್ಗೆ 8 ರಿಂದ 11.30ರ ಪೀಕ್ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಓಡಿಸಲಾಗುತ್ತದೆ. ಸಂಜೆಯ ಪೀಕ್ ಅವರ್ ಅನ್ನು ಸಹ 5 ರಿಂದ 8 ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ. ನಮ್ಮ ಮೆಟ್ರೋ ರೈಲುಗಳು ಪೀಕ್ ಅವರ್ ಅಲ್ಲದ ಸಮಯಗಳಲ್ಲಿ 10 ನಿಮಿಷದ ಬದಲಾಗಿ 6 ರಿಂದ 8 ನಿಮಿಷದಲ್ಲಿ ಸಂಚಾರ ನಡೆಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಖಾಸಗಿ ಶಾಲಾ ಬಸ್‌ಗಳ ಚಾಲಕರು ಸಹ ಬಂದ್ ಬೆಂಬಲಿಸಿದ್ದಾರೆ. ಆದ್ದರಿಂದ ಖಾಸಗಿ ಶಾಲೆಗಳು ಪೋಷಕರೇ ಮಕ್ಕಳನ್ನು ಕರೆದುಕೊಂಡು ಬಂದು ಶಾಲೆಗೆ ಬಿಡಿ ಎಂದು ಹೇಳಿವೆ. ನಗರದ ಕೆಲವು ಖಾಸಗಿ ಶಾಲೆಗಳು ಸೋಮವಾರ ರಜೆ ಘೋಷಣೆ ಮಾಡಿವೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.
ದೇವನಹಳ್ಳಿಯ ವಿಮಾನ ನಿಲ್ದಾಣದ ಬಳಿಯ ಟ್ಯಾಕ್ಸಿ ಸ್ಟಾಂಡ್‌ನಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ಕೈಗೊಳ್ಳಲಾಗಿದೆ.












Click it and Unblock the Notifications