BDA:ಬೆಂಗಳೂರಿನ ಈ ಭಾಗದಲ್ಲಿ ₹500 ಕೋಟಿ ಮೌಲ್ಯದ ಭೂಮಿ ವಶಪಡಿಸಿಕೊಂಡ ಬಿಡಿಎ-ಬಡವರ ಕಣ್ಣೀರು ಒರೆಸೋರ‍್ಯಾರು?
ಬೆಂಗಳೂರು, ಸೆಪ್ಟೆಂಬರ್, 29: ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಘರ್ಜಿಸಿದೆ. ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ ಎನ್ನಲಾದ ವಾಣಿಜ್ಯ ಕಟ್ಟಡಗಳನ್ನು ಬಿಡಿಎ ಜೆಸಿಬಿ ಮೂಲಕ ತೆರವು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದ್ದು, ಕಣ್ಣೀರಿಡುತ್ತಿದ್ದಾರೆ. ಹಾಗಾದರೆ ಬಿಡಿಎ ವಶಪಡಿಸಿಕೊಂಡ ಭೂಮಿಯ ಮೊತ್ತ ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಬಿಡಿಎ ಮಾಡಿದ ಈ ತೆರವು ಕಾರ್ಯಾಚರಣೆ ಇತಿಹಾಸದಲ್ಲೇ ಅತಿದೊಡ್ಡದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 500 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನ ಬಿಡಿಎ ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. ಕಟ್ಟಡಗಳನ್ನೆಲ್ಲ ಜೆಸಿಬಿ ಮೂಲಕ ನೆಲಸಮ ಮಾಡಲಾಗಿದ್ದು, ಇದರಿಂದ ಸಣ್ಣಪುಟ್ಟ ಅಂಗಡಿ-ಮುಂಗಟ್ಟು ಇಟ್ಟುಕೊಂಡಿದ್ದವರು ಕಣ್ಣೀರು ಹಾಕುತ್ತಿದ್ದಾರೆ.

ನಗರ ನಾಗರಬಾವಿಯಲ್ಲಿ ಬಿಡಿಎಗೆ ಸೇರಿದ್ದ ಸರ್ವೆ ನಂಬರ್ 78ರಲ್ಲಿ ಅಕ್ರಮ ಕಟ್ಟಡಗಳ ಕಾರ್ಯಾಚರಣೆ ನಡೆದಿದೆ. ಕೋರ್ಟ್ ತೀರ್ಪು ಪರವಾಗಿ ಬಂದ ಬೆನ್ನಲ್ಲೇ, ಸುಮಾರು 5 ಹೆಕ್ಟೇರ್‌ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಿದೆ. ಬಿಡಿಎ ಟಾಸ್ಕ್ ಪೋರ್ಸ್ ಎಸ್‌ಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿದುಬಂದಿದೆ.
ಬಿಡಿಎ ಪ್ರಾಧಿಕಾರದ ನಿಯಮಗಳ ಪ್ರಕಾರ, ಕೋರ್ಟ್‌ನಿಂದ ತೀರ್ಪು ಪರವಾಗಿ ಬಂದಿದ್ದರಿಂದ ನಾವು ಒತ್ತುವರಿದಾರರಿಗೆ ನೋಟಿಸ್ ನೀಡುವ ಅಗತ್ಯ ಇಲ್ಲ. ಈಗಾಗಲೇ ಮಾನವೀಯತೆ ದೃಷ್ಟಿಯಿಂದ ಹಲವು ಬಾರಿ ನೋಟಿಸ್ ನೀಡಿದ್ದೇವೆ. ಇಂಜಿನಿಯರ್ ಹಾಗೂ ಅಧಿಕಾರಿಗಳು ಸಹ ಮುಂಚೆಯೇ ತಿಳಿಸಿಹೇಳಿದ್ದರು. ಆದರೂ ಅವರು ಸ್ಥಳಾಂತರಗೊಳ್ಳಲಿಲ್ಲ. ಆದ್ದರಿಂದ ಕಾರ್ಯಾಚರಣೆ ನಡೆಸಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಡಿಎ ಕಾರ್ಯಪಾಲಕ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಜಾಗವನ್ನು ವಶಪಡಿಸಿಕೊಳ್ಳಲು ಬಿಡಿಎ ತುಂಬಾ ದಿನಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು. ಇದೀಗ ಇದಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಮತ್ತೊಂದೆಡೆ ನೋಡೋದಾದ್ರೆ, ಬಡ ಮಳಿಗೆದಾರರ ಜೀವನ ಹೇಳತೀರ್ಆಗಿದೆ. 7 ದಿನಗಳ ಕಾಲಾವಕಾಶಕ್ಕೆ ನೋಟಿಸ್ ನೀಡಿದ್ದ ಬಿಡಿಎ, 2 ದಿನ ಮುಂಚಿತವಾಗಿ ತೆರವು ಮಾಡಿದೆ. ಇದರಿಂದ ನಮಗೆ 7-8 ಲಕ್ಷ ನಷ್ಟವಾಗಿದೆ. ನಮ್ಮ ಮುಂದಿನ ಜೀವನಕ್ಕೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುವ ಮೂಲಕ ಕಣ್ಣೀರು ಹಾಕಿದ್ದಾರೆ.
ಒಟ್ಟಿನಲ್ಲಿ ಹೇಳೋದಾದ್ರೆ ಅಕ್ರಮ ಭೂಮಿಯನ್ನು ವಶಕ್ಕೆ ಪಡೆದಿರುವುದು ಉತ್ತಮ ನಿರ್ಧಾರ. ಆದರೆ ಮತ್ತೊಂದೆಡೆ ಅಲ್ಲಿದ್ದವರು ಜೀವನಕ್ಕಾಗಿ ನಿರ್ಮಾಣ ಮಾಡಿಕೊಂಡಿದ್ದ ಅಂಗಡಿ-ಮುಂಗಟ್ಟುಗಳು ಇದೀಗ ನೆಲಸಮವಾಗಿವೆ. ಇನ್ಮುಂದೆ ಅವರ ಮುಂದಿನ ಜೀವನ ಹೇಗೆ ಎನ್ನುವುದೇ ಯೋಚನೆಯಾಗಿದೆ.












Click it and Unblock the Notifications