ಬೆಂಗಳೂರಲ್ಲಿ 10 ಕಿ. ಮೀ. ದಶಪಥ ಟೋಲ್ ರಹಿತ ರಸ್ತೆ ನಿರ್ಮಾಣ
ಬೆಂಗಳೂರು, ಮಾರ್ಚ್ 03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ನಗರದ ಟೋಲ್ ರಹಿತ 10 ಕಿ. ಮೀ. ದಶಪಥ ರಸ್ತೆ ಯೋಜನೆಯನ್ನು ಪೂರ್ಣಗೊಳಿಸಲು ಮುಂದಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಈ ರಸ್ತೆ ಹಾದು ಹೋಗಲಿದ್ದು, ಈ ಎಕ್ಸ್‌ಪ್ರೆಸ್ ವೇ ನೈಸ್ ರಸ್ತೆಗೆ ಸಮಾನಾಂತರವಾಗಿ ನಿರ್ಮಾಣವಾಗುತ್ತಿದೆ. ಈ ರಸ್ತೆ ನಿರ್ಮಾಣದಿಂದ ಕೆಂಪೇಗೌಡ ಲೇಔಟ್‌ನಲ್ಲಿ ಸೈಟು ಹೊಂದಿರುವವರಿಗೆ ಮನೆ ನಿರ್ಮಾಣ ಮಾಡಲು ಅನುಕೂಲವಾಗಲಿದೆ.
ದಶಪಥ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಶೆಡ್‌ಗಳು ತೊಡಕಾಗಿತ್ತು. ಸುಮಾರು 200 ಶೆಡ್‌ಗಳನ್ನು ತೆರವು ಮಾಡಲಾಗಿದ್ದು, ರಸ್ತೆ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಒಂದು ರೈಲ್ವೆ ಕೆಳ ಸೇತುವೆ ಮತ್ತು ಚಲ್ಲಘಟ್ಟ ಸಮೀಪ 250 ಮೀಟರ್ ಸುರಂಗ ರಸ್ತೆ ಸಹ ಯೋಜನೆಯಲ್ಲಿ ಸೇರಿದೆ. ಮೈಸೂರು ರಸ್ತೆ (ಆರ್. ಆರ್. ವೈದ್ಯಕೀಯ ಕಾಲೇಜು) ಮತ್ತು ಮಾಗಡಿ ರಸ್ತೆ (ಕಡಬಗೆರೆ ವೃತ್ತ)ವನ್ನು ರಸ್ತೆ ಸಂಪರ್ಕಿಸುತ್ತದೆ. ಕೆಂಪೇಗೌಡ ಲೇಔಟ್ ಮೂಲಕ ಹಾದು ಹೋಗುತ್ತದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್‌ಗಳನ್ನು ಸಂಪರ್ಕಿಸುವ 10.5 ಕಿ. ಮೀ. ದಶಪಥ ಟೋಲ್ ರಹಿತ ಎಕ್ಸ್‌ಪ್ರೆಸ್ ವೇ ಇದಾಗಿದೆ. ಇದರಿಂದಾಗಿ ಬಡಾವಣೆಯ ಜನರು ಸಗಮವಾಗಿ ಸಂಚಾರ ನಡೆಸಲು ಸಹಕಾರಿಯಾಗಲಿದೆ. ಈ ರಸ್ತೆ ನಿರ್ಮಾಣಕ್ಕೆ ಇದ್ದ ಎಲ್ಲಾ ಅಡೆತಡೆ ಈಗ ನಿವಾರಣೆಯಾಗಿದೆ.
ಶೇ 80ರಷ್ಟು ಕಾಮಗಾರಿ ಪೂರ್ಣ: ದಶಪಥ ರಸ್ತೆ ನಿರ್ಮಾಣಕ್ಕೆ ಮಾಚೋಹಳ್ಳಿ, ಸೂಲಿಕೆರೆ, ಕನ್ನಹಳ್ಳಿ, ಚಲ್ಲಘಟ್ಟದಲ್ಲಿ ಭೂ ಸ್ವಾಧೀನ ಸಮಸ್ಯೆ ಉಂಟಾಗಿತ್ತು. ಉಳಿದಂತೆ ಶೇ 80ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ರಸ್ತೆಯಿಂದ ಮಾಗಡಿ ರಸ್ತೆ ಸಂಪರ್ಕಿಸುವ ಮಾರ್ಗದ ಕಾಮಗಾರಿಯೂ ಅಂತಿಮ ಹಂತದಲ್ಲಿದೆ.
ಹೈಕೋರ್ಟ್ ತೀರ್ಪಿನ ಬಳಿಕ ಬಿಡಿಎ ಸುಮಾರು 200 ಶೆಡ್‌ಗಳನ್ನು ತೆರವುಗೊಳಿಸಿದ್ದು, ಕಾಮಗಾರಿಗೆ ವೇಗ ನೀಡಿದೆ. ಸುಮಾರು 2 ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 585 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಸೂಲಿಕೆರೆಯಲ್ಲಿ ಸುಮಾರು 4 ಎಕರೆ ಅರಣ್ಯ ಜಮೀನು ಹಸ್ತಾಂತರವಾಗಬೇಕಿತ್ತು. ಆದರೆ ಅರಣ್ಯ ಇಲಾಖೆ ಒಪ್ಪಿಗೆ ಸಿಕ್ಕಿರಲಿಲ್ಲ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಭೂಮಿ ಹಸ್ತಾಂತರ ಮಾಡಲು ಸಹ ಒಪ್ಪಿಗೆ ಕೊಡಲಾಗಿದೆ.
ಭಾನುವಾರ ಯಶವಂತಪುರ ಕ್ಷೇತ್ರದ ಶಾಸಕ ಎಸ್. ಟಿ. ಸೋಮಶೇಖರ್ ಸುಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಡಪ್ರಭು ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿ 100 ಅಡಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮ ಹಾಗೂ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು. ಆಗ ಈ ರಸ್ತೆ ಯೋಜನೆಯ ಕುರಿತು ಸಹ ಮಾಹಿತಿಯನ್ನು ಪಡೆದಿದ್ದಾರೆ.
ಚಲ್ಲಘಟ್ಟ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಬಿಡಿಎ ನಡೆಸುತ್ತಿದೆ. ಈ ಸೇತುವೆ ನಮ್ಮ ಮೆಟ್ರೋ ಸುರಂಗ ರಸ್ತೆಗೆ ಸಹ ಸಂಪರ್ಕ ಕಲ್ಪಿಸುತ್ತದೆ. ಇದು ಮೈಸೂರು ರಸ್ತೆಗೆ ಬೈಪಾಸ್ ಆಗಿ ಸಹ ಕಾರ್ಯ ನಿರ್ವಹಣೆ ಮಾಡಲಿದೆ. ಈ ರಸ್ತೆಯಿಂದ ಕೆಂಪೇಗೌಡ ಲೇಔಟ್‌ನಲ್ಲಿ ಸೈಟು ಹೊಂದಿರುವವರು ಮನೆಗಳನ್ನು ನಿರ್ಮಾಣ ಮಾಡಲು, ಮೈಸೂರು ರಸ್ತೆ, ಮಾಗಡಿ ರಸ್ತೆಗೆ ಸಂಪರ್ಕ ಹೊಂದಲು ಸಹ ಸಹಾಯಕವಾಗಲಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ ಈ ರಸ್ತೆಯ ಯೋಜನೆ ಸಿದ್ಧವಾಗಿದ್ದು 2018ರಲ್ಲಿ. ಒಂದು ವರ್ಷದಲ್ಲಿ ಅಂದರೆ 2019ರಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಯೋಜನೆ ವಿಳಂಬವಾಗಿ ಈಗ ಅಂತಿಮ ಹಂತಕ್ಕೆ ಬಂದಿದೆ.












Click it and Unblock the Notifications