ಬೆಂಗಳೂರಲ್ಲಿ ಹೊಸ ಮಾರ್ಗಗಳಲ್ಲಿ ವೈಟ್‌ಟಾಪಿಂಗ್‌ಗೆ ಬಿಬಿಎಂಪಿ ಪ್ಲಾನ್: ಜನರಿಂದ ಈ ಕಾರಣಕ್ಕೆ ವಿರೋಧ
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕೆಲಸಗಳನ್ನು ಜನ ಸ್ವಾಗತಿಸಿದ್ದಕ್ಕಿಂತ ವಿರೋಧ ಮಾಡಿದ್ದೇ ಹೆಚ್ಚು. ಇದೀಗ ಬಿಬಿಎಂಪಿಯ ಇನ್ನೊಂದು ಹೊಸ ಕಾಮಗಾರಿಗೆ ಬೆಂಗಳೂರಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಸುದೀರ್ಘ ಅವಧಿಗೆ ರಸ್ತೆಗಳು ಬಾಳಿಕೆ ಬರಬೇಕು ಹಾಗೂ ಆಗಾಗ ಡಾಂಬರು ಹಾಕುವುದಕ್ಕೆ ಬ್ರೇಕ್ ಹಾಕಬೇಕು ಎನ್ನುವ ಉದ್ದೇಶಕ್ಕಾಗಿ ವೈಟ್‌ಟಾಪಿಂಗ್ ಪರಿಕಲ್ಪನೆಯನ್ನು ಪರಿಚಯಿಸಿತ್ತು. ಇದೀಗ ಮುಂದುವರಿದ ಭಾಗವಾಗಿ ಬೆಂಗಳೂರಿನಾದ್ಯಂತ ಒಟ್ಟು 157 ಕಿ.ಮೀ ಉದ್ದ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಆದರೆ, ಇದಕ್ಕೆ ಬೆಂಗಳೂರಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಬೆಂಗಳೂರು ಪೊಲೀಸರು ಸಹ ಈ ಉದ್ದೇಶಿತ ಕಾಮಗಾರಿಯನ್ನು 48 ಹಂತ ಅಥವಾ ವಿಭಾಗವಾರು ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಾವುದಾರು ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೂ ಮುಂಚೆ ಬಿಬಿಎಂಪಿಯು ಸಂಚಾರ ಪೊಲೀಸ್ ಅವರೊಂದಿಗೂ ಚರ್ಚೆ ಮಾಡುತ್ತದೆ. ಬೆಂಗಳೂರಿನ ಕೆಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಇರುವುದರಿಂದ ಹಾಗೂ ವಾಹನಗಳ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಅನುಮತಿ ತೆಗೆದುಕೊಳ್ಳಲಾಗುತ್ತದೆ.

ಈ ರೀತಿ ಅನುಮತಿ ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗಲೇ ವೈಟ್‌ಟಾಪಿಂಗ್ ಕಾಮಗಾರಿಗೆ ಬೆಂಗಳೂರಿಗರಿಂದ ಬಿಬಿಎಂಪಿಯು ಬೆಂಗಳೂರಿನಾದ್ಯಂತ 157 ಕಿಲೋಮೀಟರ್ ವೈಟ್‌ಟಾಪಿಂಗ್ ಕಾಮಗಾರಿಯನ್ನು ಪ್ರಾಂಭಿಸುವುದಕ್ಕೆ ಸಿದ್ಧವಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಬೆಂಗಳೂರಿನ ವಿವಿಧ ಭಾಗದಲ್ಲಿ ಕಾಮಗಾರಿಯ ಪ್ರಾಥಮಿಕ ಹಂತದ ಕೆಲಸಗಳು ಮುಗಿದಿವೆ ಎಂದು ಹೇಳಲಾಗಿದೆ.
ಆದರೆ, ಬೆಂಗಳೂರಿನ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವೈಟ್‌ಟಾಪಿಂಗ್ ಕಾಮಗಾರಿಗೆ ಮುಖ್ಯವಾಗಿ ವ್ಯಕ್ತವಾಗುತ್ತಿರುವ ವಿರೋಧಗಳಲ್ಲಿ ಈ ಯೋಜನೆಯ ಹೆಸರಿನಲ್ಲಿ ಅನವಶ್ಯವಕಾಗಿ ಹಣ ಖರ್ಚು ಮಾಡಲಾಗುತ್ತಿದೆ ಎನ್ನುವುದು ಸಹ ಒಂದಾಗಿದೆ. ಸಂಜಯನಗರ ಮುಖ್ಯ ರಸ್ತೆಯ 3.5 ಕಿಲೋಮೀಟರ್ ವೈಟ್‌ಟಾಪಿಂಗ್ ಕಾಮಗಾರಿ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲಿನ ಜನ ವೈಟ್‌ಟಾಪಿಂಗ್ WhitetoppingBeda ಬೇಡ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇದೆ. ಪಾರ್ಕಿಂಗ್ ಮಾಡಲು ಜಾಗ ಸಿಗದೆ ಜನ ಪರದಾಡುತ್ತಿದ್ದಾರೆ. ಮೊದಲು ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಹೊಸದಾಗಿ ರಸ್ತೆಗಳನ್ನು ಅಗೆದು ಜನರಿಗೆ ಸಂಕಷ್ಟ ಕೊಡುವುದಕ್ಕೆ ಬ್ರೇಕ್ ಹಾಕಬೇಕು ಎಂದು ಬೆಂಗಳೂರಿಗರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬೆಂಗಳೂರಿನ ಹೃದಯಭಾಗವಾಗಿರುವ ಎಂ.ಜಿ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸುವುದಕ್ಕೆ ಸ್ಥಳೀಯ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಎಂ.ಜಿ. ರಸ್ತೆ ಮಾರ್ಗದಲ್ಲಿ ಉದ್ದೇಶಿತ ವೈಟ್‌ಟಾಪಿಂಗ್ ಕಾಮಗಾರಿಯಿಂದಾಗಿ ವ್ಯವಹಾರ ಹಾಗೂ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಚರ್ಚ್ ಸ್ಟ್ರೀಟ್ ಭಾಗದಲ್ಲೂ ಸಮಸ್ಯೆ ಆಗಲಿದೆ ಎಂದು ಇಲ್ಲಿನ ಅಂಗಡಿಗಳ ಮಾಲೀಕರು ಹೇಳಿದ್ದಾರೆ.
ಅಲ್ಲದೆ ಈ ಹಿಂದೆ ಬೆಂಗಳೂರಿನಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸಿದ ಪ್ರದೇಶಗಳಲ್ಲಿ ಬಿಬಿಎಂಪಿಯು ಮರಗಳನ್ನು ಕಡೆದಿದೆ. ಅಲ್ಲದೆ ವೈಟ್ ಟಾಪಿಂಗ್ ಮಾಡುವುದರಿಂದ ಕನಿಷ್ಠ 40 ವರ್ಷಗಳಷ್ಟು ರಸ್ತೆಗಳು ಬಾಳಿಕೆ ಬರಲಿವೆ ಎಂದು ಹೇಳಲಾಗಿತ್ತು. ಆದರೆ, ನಾಲ್ಕೇ ವರ್ಷಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿ ಆಗಿವೆ. ಹೀಗಾಗಿ, ಈ ಉದ್ದೇಶಿತ ಯೋಜನೆಯನ್ನು ಕೈಬಿಡಬೇಕು ಎಂದು ಜನ ಆಗ್ರಹಿಸಿದ್ದಾರೆ.












Click it and Unblock the Notifications