ಕೊಳಕು ಮುಕ್ತ ಬೆಂಗಳೂರಿಗೆ ಮುಂದಾದ ಬಿಬಿಎಂಪಿ: ನಗರದಲ್ಲಿ ಭರ್ಜರಿ ಕ್ಲೀನಿಂಗ್!
ಬೆಂಗಳೂರಿಗೆ ಸ್ವಚ್ಛತೆಯಲ್ಲಿ ಕಳಪೆ ನಗರ ಎಂಬ ಹೆಸರು ಬಂದ ಮೇಲೆ ಕೊನೆಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸ್ವಚ್ಛ ಸರ್ವೇಕ್ಷಣ ಅಭಿಯಾನವನ್ನು ನಡೆಸಿದೆ. ಅದರಲ್ಲಿ ಪಾಲಿಕೆಯು ದೇಶದ 5ನೇ ಕೊಳಕು ನಗರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಇದಾದ ಮೇಲೆ ಕೊನೆಗೂ ಬಿಬಿಎಂಪಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಪಾಲಿಕೆಯ ಪೂರ್ವ, ಪಶ್ಚಿಮ, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಇಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ, ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.

ಪೂರ್ವ ವಲಯ ಆಯುಕ್ತರಾದ ಸ್ನೇಹಲ್.ಆರ್ ಅವರ ನಿರ್ದೇಶನದಂತೆ, ವಲಯ ವ್ಯಾಪ್ತಿಯಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್‌ಗಳ ನೇತೃತ್ವದಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಪವರ್ ವಾಶರ್ ಬಳಸಿ ಸ್ವಚ್ಛತಾ ಕಾರ್ಯ ನಡೆಸಿ ಪೇಂಟಿಂಗ್ ಮೂಲಕ ಕಾಂಪೌಂಡ್‌ಗಳ ಸ್ವಚ್ಛತಾ ಕಾರ್ಯ ನಡೆದಿದೆ. ಹೆಬ್ಬಾಳ ವಿಭಾಗದಲ್ಲಿ ಆರ್.ಟಿ ನಗರದ ಅಂಚೆ ಕಚೇರಿಯಿಂದ ಬಸ್ ನಿಲುಗಡೆ ಸ್ಥಳದವರೆಗೆ, ಪುಲಕೇಶಿನಗರ ವಿಭಾಗದ ವಾರ್ಡ್ 61ರ ಎಸ್.ಕೆ ಗಾರ್ಡನ್ ರಸ್ತೆಯಲ್ಲಿ, ಶಿವಾಜಿನಗರ ವಿಭಾಗದಲ್ಲಿ ಹೆಚ್.ಕೆ.ಪಿ ರಸ್ತೆಯಲ್ಲಿ, ಸರ್ವಜ್ಞ ನಗರ ವಿಭಾಗದಲ್ಲಿ ಬಾಣಸವಾಡಿ ಮುಖ್ಯ ರಸ್ತೆಯ ಸಿಂಧೂರ್ ಹೋಟೆಲ್‌ನಿಂದ ವೇಮಣ್ಣ ರಸ್ತೆಯವರೆಗೆ, ಶಾಂತಿನಗರ ವಿಭಾಗದ ವಾರ್ಡ್ 112ರ ಪರಮಹಂಸ ಯೋಗಾನಂದ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ.
ಪಶ್ಚಿಮ ವಲಯ: ಪಶ್ಚಿಮ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರ ನಿರ್ದೇಶನದಂತೆ ವಲಯ ವ್ಯಾಪ್ತಿಯಲ್ಲಿ ಆಯಾ ವಿಭಾಗಗಳ ಕಾರ್ಯಪಾಲಕ ಎಂಜಿನಿಯರ್‌ಗ ನೇತೃತ್ವದಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ರಾಜಾಜಿನಗರ ವಿಭಾಗದಲ್ಲಿ 1ನೇ ಮುಖ್ಯ ರಸ್ತೆ ಬಸವೇಶ್ವರ ನಗರ, ಮಹಾಲಕ್ಷ್ಮಿಪುರ ವಿಭಾಗದ ಪೈಪ್ ಲೈನ್ ರಸ್ತೆ ಹಾಗೂ ವಾರ್ಡ್ 49ರ ನಾಗಾಪುರ, ಚಾಮರಾಜ ಪೇಟೆ ವಿಭಾಗದ ವಾರ್ಡ್ 138ರ ಚಲವಾದಿಪಾಳ್ಯದಲ್ಲಿ, ಗಾಂಧಿನಗರ ವಿಭಾಗದ ಚಿಕ್ಕಪೇಟೆಯ ಪಾರ್ಕ್ ರಸ್ತೆ, ಗೋವಿಂದರಾಜನಗರ ವಿಭಾಗದ ವಾರ್ಡ್ 139 ಮೂಡಲಪಾಳ್ಯ ಚಂದ್ರ ಲೇಔಟ್ ನಲ್ಲಿ ಸದರಿ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜರಾಜೇಶ್ವರಿನಗರ ವಲಯ: ಇನ್ನು ರಾಜರಾಜೇಶ್ವರಿನಗರದಲ್ಲೂ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ, ಹಾಗೂ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ.
ವಲಯ ವ್ಯಾಪ್ತಿಯ ರಾಜರಾಜೇಶ್ವರಿ ವಿಭಾಗದ ಕೆಂಪೇಗೌಡ ಡಬ್ಬಲ್ ರಸ್ತೆ, ರಾಜರಾಜೇಶ್ವರಿನಗರ ಕೆಂಪೇಗೌಡ ವೃತ್ತದಿಂದ ಕನಕದಾಸ ವೃತ್ತದವರೆಗೆ ಹಾಗೂ ಕೆಂಗೇರಿ ವಿಭಾಗದ ಕೆಂಗೇರಿ ಉಪನಗರದ 1ನೇ 'ಡಿ' ಮುಖ್ಯರಸ್ತೆಯಿಂದ (ಹೊಯ್ಸಳ ವೃತ್ತದ ಹತ್ತಿರ) 8ನೇ ಅಡ್ಡರಸ್ತೆ, 1ನೇ 'ಡಿ' ಮುಖ್ಯರಸ್ತೆ (ಫುಡ್ ಪ್ಯಾಲೇಸ್ )ವರೆಗೆ ಸ್ವಚ್ಛತಾ ಕೆಲಸ ನಡೆದಿದೆ. ಈ ವೇಳೆ ಹಲವು ಅಂಗಡಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪ್ಲಾಸ್ಟಿಕ್ ವಶಕ್ಕೆ ಪಡೆದು, 25 ಪ್ರಕರಣಗಳಿಂದ ಒಟ್ಟಾರೆಯಾಗಿ ರೂ. 58,000/- ಮೊತ್ತದ ದಂಡ ವಸೂಲಿ ಮಾಡಿ ಅಂಗಡಿ ಮಾಲೀಕರಿಗೆ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
ದಾಸರಹಳ್ಳಿ ವಲಯ: ದಾಸರಹಳ್ಳಿ ವಲಯ ಆಯುಕ್ತರಾದ ನವೀನ್ ಕುಮಾರ್ ರಾಜು ಅವರ ನಿರ್ದೇಶನದಂತೆ, ವಲಯ ವ್ಯಾಪ್ತಿಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ ಉಪವಿಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications