ಬೆಂಗಳೂರು ನಗರದಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್: ಇಲ್ಲಿದೆ ಹೊಸ ಅಪ್ಡೇಟ್
ಬೆಂಗಳೂರು, ಸೆಪ್ಟೆಂಬರ್ 16: ರಾಜ್ಯವನ್ನು ಹಸಿವು ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್ ಬಡವರು, ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ವಿವಿಧ ಚಾಲಕರಿಗೆ ರಿಯಾಯಿತಿ ದರದಲ್ಲಿ ಊಟ-ಉಪಹಾರ ನೀಡುತ್ತಿದೆ. ಸರ್ಕಾರ ಬದಲಾವಣೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆ ಗುಂಪಾಗಿದ್ದ ಇಂದಿರಾ ಕ್ಯಾಂಟೀನ್‌ಗೆ ಮರು ಜೀವ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 400 ಇಂದಿರಾ ಕ್ಯಾಂಟೀನ್‌ಗಳನ್ನು ಮತ್ತೆ ಪುನಶ್ಚೇತನ ಹಾಗೂ ಈ ವರ್ಷ 188 ಹೊಸ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಘೋಷಿಸಿದ್ದರು. ಇದೀಗ ಇಂದಿರಾ ಕ್ಯಾಂಟೀನ್ ಆರಂಭದ ಪ್ರಕ್ರಿಯೆಗಳು ನಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿಯನ್ನು ನೇರವಾಗಿ ಖಾಸಗಿ ಏಜೆನ್ಸಿಗೆ ವಹಿಸಬೇಕೆಂಬ ಬಿಬಿಎಂಪಿ ಮನವಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಅಲ್ಲದೇ ಕ್ಯಾಂಟೀನ್‌ಗಳ ನಿರ್ಮಾಣ ವೆಚ್ಚದ ಶೇ.50ರಷ್ಟು ಅಂದರೆ 20 ಕೋಟಿ ರೂಪಾಯಿ ಹಾಗೂ ನಿರ್ವಹಣಾ ವೆಚ್ಚದ ಅರ್ಧದಷ್ಟು ಭರಿಸಲು ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಗಳ ಆಧಾರದ ಮೇಲೆ ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಈ ಆದೇಶಗಳನ್ನು ಹೊರಡಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ನಗರದಲ್ಲಿ 50 ಕ್ಯಾಂಟೀನ್‌ಗಳ ನಿರ್ಮಾಣ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನುದಾನ ಕೋರಿದ್ದರು. ಅಲ್ಲದೇ ಈಗಾಗಲೇ ಕ್ಯಾಂಟೀನ್‌ಗಳನ್ನು ನಿರ್ಮಿಸಿದ ಅನುಭವ ಹೊಂದಿರುವ ಎಕ್ಸೆಲ್ ಪ್ರೀಕಾಸ್ಟ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಇದನ್ನು ನಿರಾಕರಿಸಿರುವ ಸರ್ಕಾರ ಟೆಂಡರ್ ಕರೆದು ಏಜೆನ್ಸಿಯನ್ನು ಆಯ್ಕೆ ಮಾಡಲು ಬಿಬಿಎಂಪಿಗೆ ಸೂಚನೆ ನೀಡಿದೆ.
ಪ್ರತ್ಯೇಕ ಅಡುಗೆ ಕೋಣೆ ಸೇರಿದಂತೆ ಪ್ರತಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 87 ಲಕ್ಷ ರೂಪಾಯಿ ವೆಚ್ಚವಾಗಲಿದೆ. 250 ಸಬ್ಸಿಡಿ ಕ್ಯಾಂಟೀನ್‌ಗಳ ವೆಚ್ಚದ 50% ರಷ್ಟನ್ನು ನೀಡಲು ಹಾಗೂ 2017ರಿಂದ ಈ ಕ್ಯಾಂಟೀನ್‌ಗಳನ್ನು ನಡೆಸಲು ಬಿಬಿಎಂಪಿ ಖರ್ಚು ಮಾಡಿದ 220 ಕೋಟಿ ರೂ.ಗಳಲ್ಲಿ ಅರ್ಧದಷ್ಟು ಪಾವತಿಸಲು ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ.

ಸದ್ಯ ಬಿಬಿಎಂಪಿ ವ್ಯಾಪ್ತಿಯ 177 ಇಂದಿರಾ ಕ್ಯಾಂಟೀನ್‌ಗಳು ಮತ್ತು 23 ಮೊಬೈಲ್ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿದೆ. ಇದೀಗ ಹೊಸದಾಗಿ 50 ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣವಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗೆ ಮರು ಜೀವ ನೀಡಲು ಮುಂದಾಗಿರುವ ಸರ್ಕಾರ ಆಹಾರದ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದೆ. ರಾಗಿ ಮುದ್ದೆ, ಸೊಪ್ಪಿನ ಸಾರು, ಇಡ್ಲಿ, ಪುಲಾವ್, ಖಾರಾಬಾತ್, ಪೊಂಗಲ್, ಬ್ರೆಡ್-ಜಾಮ್, ಮಂಗಳೂರು ಬನ್ಸ್, ಬಿಸಿಬೇಳೆಬಾತ್, ಟೀ, ಕಾಫಿ ಲಭ್ಯವಿರಲಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿರಾಗಿ ಮುದ್ದೆ, ಚಪಾತಿ, ಅನ್ನ, ಸಾಂಬಾರು ಇರಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.












Click it and Unblock the Notifications